ADVERTISEMENT

ಯುದ್ಧ ಪೀಡಿತ ಉಕ್ರೇನ್‌ನಿಂದ 1000 ಕಿಮೀ ಒಬ್ಬನೇ ಪ್ರಯಾಣಿಸಿದ ಬಾಲಕ!

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 6:53 IST
Last Updated 7 ಮಾರ್ಚ್ 2022, 6:53 IST
ರಷ್ಯಾ ಪಡೆಗಳಿಗೆ ಪ್ರತ್ಯುತ್ತರ ನೀಡಲು ಸಜ್ಜಾಗಿ ನಿಂತಿರುವ ಉಕ್ರೇನ್ ಸೇನೆಯ ಯೋಧ (ಚಿತ್ರ-ಎಎಫ್‌ಪಿ)
ರಷ್ಯಾ ಪಡೆಗಳಿಗೆ ಪ್ರತ್ಯುತ್ತರ ನೀಡಲು ಸಜ್ಜಾಗಿ ನಿಂತಿರುವ ಉಕ್ರೇನ್ ಸೇನೆಯ ಯೋಧ (ಚಿತ್ರ-ಎಎಫ್‌ಪಿ)   

ಕೀವ್: ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣದ ನಡುವೆ 11 ವರ್ಷದ ಉಕ್ರೇನ್ ಬಾಲಕನೊಬ್ಬ ಬ್ಯಾಕ್‌ಪ್ಯಾಕ್ ಹಿಡಿದು, ತನ್ನ ತಾಯಿ ಕೊಟ್ಟಿದ್ದ ಸಂದೇಶ ಮತ್ತು ಟೆಲಿಫೋನ್ ಸಂಖ್ಯೆಯನ್ನು ಕೈಯಲ್ಲಿ ಬರೆದುಕೊಂಡು 1,000 ಕಿಲೋಮೀಟರ್ ಒಬ್ಬನೇ ಪ್ರಯಾಣಿಸಿದ ನಂತರ ಸ್ಲೊವಾಕಿಯಾ ತಲುಪಿದ್ದಾನೆ.

ಕಳೆದ ವಾರ ರಷ್ಯಾ ಪಡೆಗಳು ವಶಪಡಿಸಿಕೊಂಡ ವಿದ್ಯುತ್ ಸ್ಥಾವರವಿರುವ ಆಗ್ನೇಯ ಉಕ್ರೇನ್‌ನ ಝಪೊರಿಝಿಯಾದಿಂದ ಬಾಲಕ ಬಂದಿದ್ದಾನೆ. ವರದಿಗಳ ಪ್ರಕಾರ, ಅನಾರೋಗ್ಯ ಪೀಡಿತ ಸಂಬಂಧಿಯೊಬ್ಬರನ್ನು ನೋಡಿಕೊಳ್ಳಲು ಆತನ ಪೋಷಕರು ಉಕ್ರೇನ್‌‌ನಲ್ಲಿಯೇ ಉಳಿಯಬೇಕಾಯಿತು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬಹುದೂರದ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ, 'ಬಾಲಕನ ನಗು, ನಿರ್ಭಯತೆ ಮತ್ತು ದೃಢ ನಿಶ್ಚಯ ಹೊಂದಿರುವ ಈತ ನಿಜವಾದ ನಾಯಕ ಎಂಬುದನ್ನು ತೋರಿಸುತ್ತದೆ' ಎಂದು ಅಧಿಕಾರಿಗಳೇ ಆತನಿಗೆ ಮನಸೋತಿರುವುದಾಗಿ ಸ್ಲೋವಾಕಿಯಾದ ಆಂತರಿಕ ಸಚಿವಾಲಯವು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ.

ADVERTISEMENT

ವರದಿಗಳ ಪ್ರಕಾರ, ಸಂಬಂಧಿಕರನ್ನು ಹುಡುಕಲು ಆತನನ್ನು ರೈಲಿನಲ್ಲಿ ಸ್ಲೋವಾಕಿಯಾಕ್ಕೆ ಕಳುಹಿಸಲಾಗಿತ್ತು. ಆತನ ಬಳಿ ಪ್ಲಾಸ್ಟಿಕ್ ಚೀಲ, ಪಾಸ್ ಪೋರ್ಟ್ ಮತ್ತು ಸಂದೇಶವೊಂದು ಇತ್ತು ಎಂದು ಆತನ ತಾಯಿ ತಿಳಿಸಿದ್ದಾರೆ.

ಬಾಲಕ ಸ್ಲೊವಾಕಿಯಾಕ್ಕೆ ಬಂದಾಗ ಆತನ ಕೈಯಲ್ಲಿ ಫೋನ್ ನಂಬರ್, ಪಾಸ್‌ಪೋರ್ಟ್‌ ಮತ್ತು ಮಡಿಚಿಟ್ಟಿದ್ದ ಕಾಗದದ ತುಂಡು ಇತ್ತು. ಇದರಿಂದಾಗಿ ಗಡಿಯಲ್ಲಿದ್ದ ಅಧಿಕಾರಿಗಳು, ರಾಜಧಾನಿ ಬ್ರಾಟಿಸ್ಲಾವಾದಲ್ಲಿರುವ ಅವನ ಸಂಬಂಧಿಕರನ್ನು ಸಂಪರ್ಕಿಸಿದ್ದಾರೆ. ಬಳಿಕ ಆತನನ್ನು ಅವರಿಗೆ ಒಪ್ಪಿಸಿದ್ದಾರೆ.

ವರದಿಗಳ ಪ್ರಕಾರ, ಬಾಲಕನ ತಾಯಿ, ಸ್ಲೋವಾಕಿಯ ಸರ್ಕಾರ ಮತ್ತು ಆತನ ಬಗ್ಗೆ ಕಾಳಜಿ ವಹಿಸಿದ ಪೊಲೀಸರಿಗೆ ಧನ್ಯವಾದ ಸಲ್ಲಿಸಲು ಸಂದೇಶವನ್ನು ಕಳುಹಿಸಿದ್ದಾರೆ.

'ಬಾಲಕನ ಬಳಿಯಲ್ಲಿ ಫೋನ್ ನಂಬರ್ ಮತ್ತು ಕಾಗದದಲ್ಲಿದ್ದ ಸಂದೇಶಕ್ಕೆ ಧನ್ಯವಾದಗಳು. ಇದರಿಂದಾಗಿಯೇ ನಾವು ಆತನ ಸಂಬಂಧಿಕರನ್ನು ಸಂಪರ್ಕಿಸಲು ಸಾಧ್ಯವಾಯಿತು' ಎಂದು ಸಚಿವಾಲಯ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.