ADVERTISEMENT

ಬಾಂಗ್ಲಾದೇಶ ವಿದ್ಯಾರ್ಥಿಗಳ ಪ್ರತಿಭಟನೆ: ಹೈಕೋರ್ಟ್‌ನ 12 ನ್ಯಾಯಮೂರ್ತಿಗಳ ಅಮಾನತು

ಪಿಟಿಐ
Published 16 ಅಕ್ಟೋಬರ್ 2024, 14:35 IST
Last Updated 16 ಅಕ್ಟೋಬರ್ 2024, 14:35 IST
<div class="paragraphs"><p>ಬಾಂಗ್ಲಾದೇಶ ಧ್ವಜ</p></div>

ಬಾಂಗ್ಲಾದೇಶ ಧ್ವಜ

   

ಢಾಕಾ: ಅವಾಮಿ ಲೀಗ್‌ ಬೆಂಬಲಿತ 'ಫ್ಯಾಸಿಸ್ಟ್‌ ನ್ಯಾಯಮೂರ್ತಿ'ಗಳ ವಜಾಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ, ಹೈಕೋರ್ಟ್‌ನ 12 ನ್ಯಾಯಮೂರ್ತಿಗಳನ್ನು ಬಾಂಗ್ಲಾದೇಶ ಸುಪ್ರೀಂ ಕೋರ್ಟ್‌ ಬುಧವಾರ ಅಮಾನತು ಮಾಡಿದೆ.

ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ ನಡೆದ ವ್ಯಾಪಕ ಪ್ರತಿಭಟನೆ ಹಾಗೂ ಹಿಂಸಾಚಾರದಿಂದಾಗಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಸರ್ಕಾರ ಆಗಸ್ಟ್‌ನಲ್ಲಿ ಪತನಗೊಂಡಿತ್ತು. ಹಸೀನಾ ಅವರು, ಆಗಸ್ಟ್‌ 5ರಂದು ಪಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದಲೇ ಪಲಾಯನ ಮಾಡಿದ್ದಾರೆ.

ADVERTISEMENT

ಹೈಕೋರ್ಟ್‌ ಆವರಣದಲ್ಲಿ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು, ಅವಾಮಿ ಲೀಗ್‌ ಬೆಂಬಲಿತ ಫ್ಯಾಸಿಸ್ಟ್‌ ನ್ಯಾಯಮೂರ್ತಿಗಳನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಇದರ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಯ್ಯದ್‌ ರೆಫಾತ್‌ ಅಹ್ಮದ್‌ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು 'ದಿ ಡೈಲಿ ಸ್ಟಾರ್‌' ಪತ್ರಿಕೆ ವರದಿ ಮಾಡಿದೆ.

'12 ನ್ಯಾಯಮೂರ್ತಿಗಳನ್ನು ಯಾವುದೇ ಪೀಠಗಳಿಗೆ ನೇಮಿಸುವಂತಿಲ್ಲ. ಅಕ್ಟೋಬರ್‌ 20ರಂದು ನ್ಯಾಯಾಲಯದ ಚಟುವಟಿಕೆಗಳು ಆರಂಭವಾಗಲಿದ್ದು, ಅವರನ್ನು ನ್ಯಾಯಾಂಗದ ಚಟುವಟಿಕೆಗಳಿಂದ ಅಮಾನತು ಮಾಡಲಾಗಿದೆ' ಎಂದು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅಜಿಜ್‌ ಅಹ್ಮದ್‌ ಭುಯಾನ್‌ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

'ನ್ಯಾಯಮೂರ್ತಿಗಳು ರಾಜೀನಾಮೆ ನೀಡದ ಕಾರಣ ಹಾಗೂ ಅವರನ್ನು ವಜಾಗೊಳಿಸಲು ಕಾನೂನಿನ ಚೌಕಟ್ಟಿನಲ್ಲಿ ಅವಕಾಶ ಇಲ್ಲದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ' ಎಂದೂ ವಿವರಿಸಿದ್ದಾರೆ.

'ನ್ಯಾಯಮೂರ್ತಿಗಳ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯು ಸುಪ್ರೀಂ ಕೋರ್ಟ್‌ ಆವರಣದಿಂದ ಆರಂಭವಾಗಿತ್ತು' ಎಂದು bdnews24.com ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಅವರ ನಿರ್ಧಾರ ಹೊರಬೀಳುತ್ತಿದ್ದಂತೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಭಾನುವಾರದ ವರೆಗೆ ಮುಂದೂಡಿದ್ದಾರೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸರ್ಜಿಸ್‌ ಅಲಮ್ ಎಂಬವರು, 'ಹಸೀನಾ ಅವರ ಅವಾಮಿ ಲೀಗ್‌ ಪಕ್ಷದೊಂದಿಗೆ ಸಂಪರ್ಕದಲ್ಲಿರುವ ಹಾಗೂ ಹಿಂದಿನ 'ಫ್ಯಾಸಿಸ್ಟ್‌ ಸರ್ಕಾರ'ದೊಂದಿಗೆ ನಂಟು ಹೊಂದಿದ್ದ ನ್ಯಾಯಮೂರ್ತಿಗಳು ರಾಜೀನಾಮೆ ನೀಡಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿತ್ತು' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.