ಕಾಬೂಲ್: ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರವು ಉದ್ದೇಶ ಪೂರ್ವಕವಾಗಿ 14 ಲಕ್ಷ ಹೆಣ್ಣುಮಕ್ಕಳನ್ನು ಶಾಲೆಗಳಿಂದ ಹೊರಗುಳಿಯುವಂತೆ ಮಾಡಿದೆ ಎಂದು ಯುನೆಸ್ಕೊ ಗುರುವಾರ ಹೇಳಿದೆ. ಹೆಣ್ಣುಮಕ್ಕಳು ಪ್ರೌಢ ಮತ್ತು ಉನ್ನತ ಶಿಕ್ಷಣ ಪಡೆಯುವುದಕ್ಕೆ ಅಫ್ಗಾನಿಸ್ತಾನದಲ್ಲಿ ನಿಷೇಧ ಹೇರಲಾಗಿದೆ.
2021ರಲ್ಲಿ ಅಫ್ಗಾನಿಸ್ತಾನದ ಆಡಳಿತವನ್ನು ತನ್ನ ಕೈವಶ ಮಾಡಿ ಕೊಂಡಿದ್ದ ತಾಲಿಬಾನ್, ಹೆಣ್ಣುಮಕ್ಕಳು ಆರನೇ ತರಗತಿಗಿಂತ ಹೆಚ್ಚಿನ ಶಿಕ್ಷಣ ಪಡೆಯುವುದನ್ನು ನಿಷೇಧಿಸಿತ್ತು. ಇದೀಗ ತಾಲಿಬಾನ್ ಆಡಳಿತ ಮೂರು ವರ್ಷ ಪೂರ್ಣಗೊಂಡಿದ್ದು, ಈ ನಿಷೇಧ ತೆರವುಗೊಳಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
2023ರ ಏಪ್ರಿಲ್ ಬಳಿಕ 3 ಲಕ್ಷ ಹೆಣ್ಣುಮಕ್ಕಳು ಒಳಗೊಂಡಂತೆ ತಾಲಿಬಾನ್ ಸಂಘಟನೆ ಅಧಿಕಾರ ವಹಿಸಿಕೊಂಡ ನಂತರ ಸುಮಾರು 14 ಲಕ್ಷ ಹೆಣ್ಣುಮಕ್ಕಳು ಪ್ರೌಢ ಶಾಲಾ ಶಿಕ್ಷಣ ಪಡೆಯುವ ಅವಕಾಶ ಕಳೆದುಕೊಂಡಿದ್ದಾರೆ ಎಂದು ಯುನೆಸ್ಕೊ ತಿಳಿಸಿದೆ. ಈ ನಿಷೇಧ ಜಾರಿಗೂ ಮುನ್ನ ಶಾಲೆಗಳಿಂದ ದೂರವುಳಿದವರನ್ನೂ ಸೇರಿಸಿಕೊಂಡರೆ, ಸುಮಾರು 25 ಲಕ್ಷ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.