ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್ ಮೇಲೆ ಬುಧವಾರ ರಾತ್ರಿ ರಾಕೆಟ್ ದಾಳಿ ನಡೆದಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ರಾಯಭಾರ ಕಚೇರಿಗಳಿರುವ ಹೆಚ್ಚಿನ ಭದ್ರತೆ ಇರುವ ‘ಹಸಿರು ವಲಯ‘ದ ಮೇಲೇ ಎರಡು ರಾಕೆಟ್‌ಗಳು ಬಿದ್ದಿವೆ.
ಇರಾಕ್‌ನಲ್ಲಿರುವ ಅಮೆರಿಕದ ಅಲ್ ಅಸದ್ ವಾಯುನೆಲೆ ಮತ್ತು ಎರ್ಬಿಲ್ ಸೇನಾ ನೆಲೆಯ ಮೇಲೆ ದಾಳಿ ಇರಾನ್ ದಾಳಿ ನಡೆಸಿದ 24 ಗಂಟೆ ಕಳೆಯುವ ಮೊದಲೇ ರಾಕೆಟ್ ದಾಳಿ ನಡೆದಿರುವುದು ಮಧ್ಯಪ್ರಾಚ್ಯದಲ್ಲಿ ಆವರಿಸಿರುವ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಎರಡು ‘ಕತ್ಯುಷಾ’ ರಾಕೆಟ್‌ಗಳು ಹಸಿರು ವಲಯದಲ್ಲಿ ಬಿದ್ದಿವೆ. ರಾಕೆಟ್ ದಾಳಿಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಇರಾಕ್‌ನ ರಕ್ಷಣಾ ಸೇವೆಗಳ ವಿಭಾಗ ಮತ್ತು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಅಮೆರಿಕ ರಾಯಭಾರ ಕಚೇರಿಯಿಂದ ನೂರು ಮೀಟರ್ ಸಮೀಪದಲ್ಲೇಈ ರಾಕೆಟ್‌ಗಳು ಬಂದು ಬಿದ್ದಿವೆ ಎಂದು ವರದಿಯಾಗಿದೆ.
ಅಮೆರಿಕ ಇತ್ತೀಚೆಗೆ ಬಾಗ್ದಾದ್ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಖುದ್ಸ್ ಪಡೆಯ ಮುಖ್ಯಸ್ಥ ಸುಲೇಮಾನಿ ಅವರ ಜೊತೆಗೆ ಇರಾಕ್‌ನ ಹಶದ್ ಅಲ್ ಶಾಬಿ ಪಡೆಯ ಪ್ರಮುಖರಾಗಿದ್ದ ಮಹ್ದಿ ಅಲ್ ಮುಹಾಂದಿಸ್ ಅವರೂ ಹತ್ಯೆಗೀಡಾಗಿದ್ದರು. ಹಶದ್ ಅಲ್ ಶಾಬಿ ಪಡೆಯು ಇರಾಕ್ ಸೇನೆಯೊಂದಿಗೆ ಕಾರ್ಯಾಚರಣೆ ನಡೆಸುತ್ತದಾದರೂ, ಇರಾನ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಇದೇ ಪಡೆ ಬಾಗ್ದಾದ್‌ನ ಹಸಿರುವ ವಲಯದ ಮೇಲೆ ಕತ್ಯುಷಾ ರಾಕೆಟ್ ದಾಳಿ ನಡೆಸಿದೆ ಎಂದು ಅಮೆರಿಕ ಶಂಕಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.