ಲಹೈನಾ (ಹವಾಯಿ): ಅಮೆರಿಕದ ಹವಾಯಿ ದ್ವೀಪದ ಮಾಯಿಯಲ್ಲಿ ಭೀಕರ ಕಾಳ್ಗಿಚ್ಚು ಹರಡಿ ಹಲವು ಭಾಗಗಳನ್ನು ನಾಶಪಡಿಸಿ, ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಸಾವಿನ ಸಂಖ್ಯೆ 106ಕ್ಕೇರಿದೆ.
ಐತಿಹಾಸಿಕ ಪಟ್ಟಣ ಲಹೈನಾವನ್ನು ಸುಟ್ಟುಹಾಕಿದ ಕಾಳ್ಗಿಚ್ಚಿನಲ್ಲಿ ಸಾವನ್ನಪ್ಪಿದ ಇಬ್ಬರ ಹೆಸರನ್ನು ಮಾಯಿ ಕೌಂಟಿ ಬಿಡುಗಡೆ ಮಾಡಿದೆ.
ಕಳೆದ ಒಂದು ಶತಮಾನದಲ್ಲಿ ಅಮೆರಿಕದಲ್ಲಿ ಸಂಭವಿಸಿದ ಅತಿ ಭೀಕರ ಕಾಳ್ಗಿಚ್ಚು ದುರಂತ ಇದಾಗಿದೆ. 13,000ಕ್ಕೂ ಹೆಚ್ಚು ಕಟ್ಟಡಗಳು ಭಸ್ಮವಾಗಿವೆ. ಸಾವಿರಾರು ಜನರು ನೆಲೆ ನಿರ್ವಸತಿಗರಾಗಿ, ನಿರಾಶ್ರಿತ ಶಿಬಿರಗಳಲ್ಲಿ ಅಶ್ರಯ ಪಡೆದಿದ್ದಾರೆ.
ಮೃತಪಟ್ಟವರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಅಮೆರಿಕ ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆಯ ವಿಧಿ ವಿಜ್ಞಾನ ತಜ್ಞರು ಮತ್ತು ಶ್ವಾನದಳದ ನೆರವಿನಿಂದ ಶವಗಳ ಗುರುತು ಪತ್ತೆ ಹಚ್ಚಲಾಗುತ್ತಿದೆ. ಮೃತರ ಗುರುತು ಪತ್ತೆ ಹಚ್ಚುವುದು ಅತ್ಯಂತ ಸವಾಲಿನಿಂದ ಕೂಡಿದ ಕೆಲಸವಾಗಿದೆ ಎಂದು ಹವಾಯಿ ಗವರ್ನರ್ ಜೋಶ್ ಗ್ರೀನ್ ಹೇಳಿದ್ದಾರೆ ತಿಳಿಸಿದ್ದಾರೆ.
ವಾರಂತ್ಯದಲ್ಲಿ ಮತ್ತೆ ಚಂಡಮಾರುತ ಬೀಸುವ ಸಾಧ್ಯತೆಯಿದೆ ಎಂದು ಗ್ರೀನ್ ಎಚ್ಚರಿಸಿದ್ದಾರೆ.
ಕಾಳ್ಗಿಚ್ಚಿಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಯುತ್ತಿದೆ. ಬೆಂಕಿಯನ್ನು ನಿಯಂತ್ರಿಸಿದ್ದರೂ ಜ್ವಾಲೆಯು ವಿಷಕಾರಿ ಹೊಗೆಯನ್ನು ಹೊರಸೂಸಿದ ನಂತರ ಕುಡಿಯುವ ನೀರು ಸೇರಿ ಹಲವು ಉಪ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಉಳಿಯಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಪತ್ನಿ ಜಿಲ್ ಬೈಡನ್ ಜತೆಗೆ ಶೀಘ್ರವೇ ಹವಾಯಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.