ಬೆಂಗಳೂರು: 2023 ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಅಮೆರಿಕದ ಅರ್ಥಶಾಸ್ತ್ರಜ್ಞೆ, 77 ವರ್ಷದ ಕ್ಲೌಡಿಯಾ ಗೋಲ್ಡಿನ್ (Claudia Goldin) ಅವರಿಗೆ ಲಭಿಸಿದೆ.
ಈ ಮಾಹಿತಿಯನ್ನು Royal Swedish Academy of Sciences ನ ನೊಬೆಲ್ ಪ್ರೈಜಸ್ X ವೇದಿಕೆ ಹಂಚಿಕೊಂಡಿದೆ.
ಕ್ಲೌಡಿಯಾ ಗೋಲ್ಡಿನ್ ಅವರು ‘ಮಹಿಳಾ ಕಾರ್ಮಿಕರು ಮತ್ತು ಮಹಿಳಾ ಕಾರ್ಮಿಕರ ಉತ್ಪಾದನೆಗಳ ಮಾರುಕಟ್ಟೆ’ ಬಗೆಗೆ ಮಾಡಿರುವ ವ್ಯಾಪಕ ಸಂಶೋಧನೆ ಪರಿಗಣಿಸಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ಅಕಾಡೆಮಿ ಹೇಳಿದೆ.
ಗೋಲ್ಡಿನ್ ಅವರು ತಮ್ಮ ಸಂಶೋಧನೆಗಳಿಗೆ ಸುಮಾರು 200 ವರ್ಷದ ಅಂಕಿ–ಸಂಖ್ಯೆಗಳನ್ನು ಬಳಸಿರುವುದು ಗಮನಾರ್ಹ ಎನ್ನಲಾಗಿದೆ. ನ್ಯೂಯಾರ್ಕ್ ನಗರ ವಾಸಿಯಾಗಿರುವ ಅವರು, ಹಾರ್ವರ್ಡ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕಿ ಕೂಡ ಆಗಿದ್ದಾರೆ.
ನಾನು ಯಾವಾಗಲೂ ಆಶಾವಾದಿ. ಆದರೆ 1990ರ ದಶಕದಲ್ಲಿ ಅಮೆರಿಕದ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಪಾಲು ವಿಶ್ವದಲ್ಲೇ ಅತಿ ಹೆಚ್ಚಿನ ಮಟ್ಟದಲ್ಲಿತ್ತು. ಈಗ ಅದು ಆ ಮಟ್ಟದಲ್ಲಿ ಉಳಿದಿಲ್ಲ. ಕುಟುಂಬ ಮತ್ತು ಮನೆಯನ್ನು ಮಾರುಕಟ್ಟೆ ಹಾಗೂ ಉದ್ಯೋಗದ ಜೊತೆ ಒಗ್ಗೂಡಿಸುವ ಕುರಿತು ನಾವು ಈಗ ಪ್ರಶ್ನೆಗಳನ್ನು ಕೇಳಬೇಕಿದೆ.ಕ್ಲೌಡಿಯಾ ಗೋಲ್ಡಿನ್
1968 ರಿಂದ Royal Swedish Academy ಅರ್ಥಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿಯನ್ನು ಕೊಡಲು ಪ್ರಾರಂಭಿಸಿತು. ಇದುವರೆಗೆ ಒಟ್ಟು 92 ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಸಿಕ್ಕಿದೆ. ಅದರಲ್ಲಿ ಕ್ಲೌಡಿಯಾ ಅವರೂ ಸೇರಿದಂತೆ ಇಬ್ಬರೇ ಮಹಿಳೆಯರು ನೊಬೆಲ್ ಪಡೆದಿದ್ದಾರೆ.
ಈಗಾಗಲೇ ಈ ವರ್ಷದ ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಶಾಂತಿ ಹಾಗೂ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗಳು ಘೋಷಣೆಯಾಗಿದ್ದು, ಡಿಸೆಂಬರ್‌ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ನೊಬೆಲ್ ಪ್ರಶಸ್ತಿಯು 1 ಮಿಲಿಯನ್ ಡಾಲರ್ (ಅಂದಾಜು ₹8.32 ಕೋಟಿ) ನಗದು, ಚಿನ್ನದ ಪದಕ ಹಾಗೂ ಪ್ರಶಂಸಾ ಪತ್ರವನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.