ಫ್ಲೋಸಮ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರ ಶತಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ಅವರು ಫಿಲಡೆಲ್ಫಿಯಾ ಉಪನಗರದಲ್ಲಿ ಗುರುವಾರ ಏಕಾಂಗಿ ಪ್ರಚಾರ ನಡೆಸಿದರು. ಬೇಗನೇ ಮತದಾನ ಮಾಡಿ ಎಂದು ಜನರಲ್ಲಿ ಮನವಿ ಮಾಡಿದರು. ‘ಏಕೆ ಮಾಡಬೇಕು?’ ಎಂದು ಸಮಾರಂಭದಲ್ಲಿ ಹಾಜರಿದ್ದ ಕೆಲವರು ಈ ವೇಳೆ ಪ್ರಶ್ನಿಸಿದ ಪ್ರಸಂಗವೂ ನಡೆಯಿತು.
ಫ್ಲೋಸಮ್ ರಿಡ್ಲೆ ಹೈಸ್ಕೂಲ್ ಆಡಿಟೋರಿಯಂನಲ್ಲಿ ನಡೆದ ಸಮಾವೇಶದಲ್ಲಿ ಸುಮಾರು 15 ನಿಮಿಷ ಎಲಾನ್ ಮಸ್ಕ್ ಮಾತನಾಡಿದರು. ಬಳಿಕ ಸಭೀಕರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಸೇರಿದವರಲ್ಲಿ ಬಹುಪಾಲು ಮಂದಿ ‘Make America Great Again’ ಎನ್ನುವ ಟೋಪಿ ಧರಿಸಿದ್ದರು.
ವೇದಿಕೆಯಲ್ಲಿ ನಡೆಯುತ್ತಾ ಭಾಷಣ ಮಾಡುತ್ತಿದ್ದ ಮಸ್ಕ್ ಅವರ ವಿಡಿಯೊವನ್ನು ಜನರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದರು. ಅಮೆರಿಕದ ಸಂವಿಧಾನವನ್ನು ಎತ್ತಿ ಹಿಡಿಯಬೇಕಾಗಿದೆ ಎನ್ನುವ ಅವರ ಮಾತಿಗೆ ಜನರಿಂದ ಹರ್ಷೋದ್ಗಾರ ವ್ಯಕ್ತವಾಯಿತು.
‘ಅಮೆರಿಕದ ಇಂದಿನ ಸ್ಥಿತಿಗೆ ತಲುಪಿಸಿದ ಮೂಲಭೂತ ಮೌಲ್ಯ ಇದು (ಸಂವಿಧಾನ). ಈ ಮೌಲ್ಯಗಳನ್ನು ವಿರೋಧಿಸುವವರು ಮೂಲಭೂತವಾಗಿ ಅಮೆರಿಕ ವಿರೋಧಿಗಳಾಗಿದ್ದಾರೆ. ಅವರು ಹಾಳಾಗಿ ಹೋಗಲಿ’ ಎಂದು ಹೇಳಿದರು. ಈ ಮಾತಿಗೂ ಸಭೀಕರಿಂದ ಜೋರಾದ ಉದ್ಗಾರ ಬಂತು. ಎಲಾನ್ ಮಸ್ಕ್ ಮೂಲತಃ ದಕ್ಷಿಣ ಆಫ್ರಿಕಾದವರು.
‘ನೀವು ನಿಮ್ಮ ಕುಟುಂಬಸ್ಥರು ಮತದಾನಕ್ಕೆ ನೋಂದಣಿ ಮಾಡಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಬೇಗನೇ ಮಾಡಿಸಿಕೊಳ್ಳಿ. ಬೇಗನೇ ಮತ ಚಲಾಯಿಸಿ’ ಎಂದು ಕರೆ ನೀಡಿದರು. ಸುಮಾರು 12 ಮಂದಿ ಸಭೀಕರ ಪ್ರಶ್ನೆಗಳಿಗೆ ಮಸ್ಕ್ ಉತ್ತರಿಸಿದರು.
ಪೆನ್ಸಿಲ್ವೇನಿಯಾದಲ್ಲಿ ಬೇಗನೇ ಏಕೆ ಮತ ಚಲಾಯಿಸಬೇಕು ಎಂದು ಹಲವು ಸಭೀಕರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.
ಬೇಗನೇ ಮತದಾನ ಮಾಡುವ ವಿಧಾನವನ್ನು ಡೊನಾಲ್ಡ್ ಟ್ರಂಪ್ ಟೀಕಿಸಿದ್ದರು. ಚುನಾವಣೆಯಲ್ಲಿ ಅಕ್ರಮ ಎಸಗಲು ಹೀಗೆ ಮಾಡಲಾಗುತ್ತದೆ ಎಂದು ಟ್ರಂಪ್ ಈ ಹಿಂದೆ ದೂರಿದ್ದರು. ಹೀಗಾಗಿ ಬೇಗನೇ ಮತ ಚಲಾಯಿಸಿ ಎನ್ನುವ ಮಸ್ಕ್ ಅವರ ಮನವಿಯನ್ನು ಹಲವು ಮಂದಿ ಪ್ರಶ್ನಿಸಿದರು.
(ವಿವಿಧ ಏಜೆನ್ಸಿಗಳ ವರದಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.