ADVERTISEMENT

ದಕ್ಷಿಣ ಸೊಮಾಲಿಯಾದ ಹೋಟೆಲ್‌ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: 26 ಸಾವು

ಉಗ್ರರ ಕೃತ್ಯ * ಹೊಣೆ ಹೊತ್ತ ಅಲ್‌–ಶಬಾಬ್‌ ಸಂಘಟನೆ

ಏಜೆನ್ಸೀಸ್
Published 13 ಜುಲೈ 2019, 20:00 IST
Last Updated 13 ಜುಲೈ 2019, 20:00 IST
ಗುಂಡಿನ ದಾಳಿಗೊಳಗಾದ ಮೆದೀನಾ ಹೋಟೆಲ್‌ನ ಗೋಡೆ ಛಿದ್ರವಾಗಿದೆ - –ಎಎಫ್‌ಪಿ ಚಿತ್ರ
ಗುಂಡಿನ ದಾಳಿಗೊಳಗಾದ ಮೆದೀನಾ ಹೋಟೆಲ್‌ನ ಗೋಡೆ ಛಿದ್ರವಾಗಿದೆ - –ಎಎಫ್‌ಪಿ ಚಿತ್ರ   

ಮೊಗದಿಶು: ದಕ್ಷಿಣ ಸೊಮಾಲಿಯಾದ ಪ್ರತಿಷ್ಠಿತ ಮೆದೀನಾ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಆತ್ಮಾಹುತಿ ಬಾಂಬ್‌ ಹಾಗೂ ಗುಂಡಿನ ದಾಳಿಯಲ್ಲಿ ವಿದೇಶಿಗರು ಸೇರಿದಂತೆ 26 ಜನ ಮೃತಪಟ್ಟಿದ್ದಾರೆ.

ಅಲ್‌–ಖೈದಾ ಸಂಪರ್ಕವಿರುವಅಲ್‌–ಶಬಾಬ್‌ ಉಗ್ರ ಸಂಘಟನೆ ದಾಳಿ ಹೊಣೆ ಹೊತ್ತಿದ್ದು, ದಾಳಿಯಲ್ಲಿ 56 ಜನ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

ಕಿಸ್ಮಾಯೊ ನಗರದಲ್ಲಿರುವ ಹೋಟೆಲ್‌ಗೆಸ್ಫೋಟಕಗಳಿದ್ದ ವಾಹನವನ್ನು ದಾಳಿಕೋರ ನುಗ್ಗಿಸಿದ್ದಾನೆ. ಈ ವೇಳೆ ಭಾರಿ ಸ್ಫೋಟ ಸಂಭವಿಸಿದೆ. ನಂತರದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳಿದ್ದ ದಾಳಿಕೋರರು ಗುಂಡಿನ ದಾಳಿ ನಡೆಸುತ್ತಾ ಹೋಟೆಲ್‌ ಪ್ರವೇಶಿಸಿದ್ದಾರೆ. ಭದ್ರತಾ ಪಡೆಗಳುಸತತ 12 ಗಂಟೆ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

‘ದಾಳಿಯಲ್ಲಿ 26 ಜನ ಮೃತಪಟ್ಟಿದ್ದು, ಇವರಲ್ಲಿ ಮೂವರು ಕೀನ್ಯಾ ಪ್ರಜೆಗಳು, ಇಬ್ಬರು ಅಮೆರಿಕ, ಒಬ್ಬ ಬ್ರಿಟನ್‌, ಒಬ್ಬ ಕೆನಡಾ ಪ್ರಜೆ,ಮೂರು ತಾಂಜಾನಿಯಾದ ಪ್ರಜೆಗಳಿದ್ದಾರೆ. ಗಾಯಗೊಂಡವರ ಪೈಕಿ ಇಬ್ಬರು ಚೀನಾ ಪ್ರಜೆಗಳು’ ಎಂದು ಅರೆ– ಸ್ವಾಯತ್ತ ಜುಬಾಲ್ಯಾಂಡ್‌ ಪ್ರದೇಶದಅಧ್ಯಕ್ಷ ಅಹ್ಮದ್‌ ಮೊಹಮ್ಮದ್‌ ಇಸ್ಲಾಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತ್ಯಕ್ಷದರ್ಶಿಮಾಹಿತಿಯಂತೆ ಸೊಮಾಲಿ ಪೊಲೀಸ್ ಸಮವಸ್ತ್ರ ಧರಿಸಿದ್ದ ನಾಲ್ವರು ಬಂದೂಕುಧಾರಿಗಳು ದಾಳಿ ನಡೆಸಿದ್ದರು ಎಂದು ಅಧಿಕಾರಿಗಳು ಊಹಿಸಿದ್ದಾರೆ.

ಪತ್ರಕರ್ತ ಸಾವು: ದಾಳಿಯಲ್ಲಿ ಸ್ಥಳೀಯ ಪತ್ರಕರ್ತ ಮಹಮ್ಮದ್‌ ಸಾಹಲ್‌ ಮೃತಪಟ್ಟಿದ್ದು, ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ(ಆಕ್ಟಿವಿಸ್ಟ್‌)ಹೂಡನ್‌ ನಾಲೆಯೆ ಮತ್ತು ಆಕೆಯ ಪತಿ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ವಾಸ್ತವ್ಯ: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿಪ್ರತಿಷ್ಠಿತ ಹೋಟೆಲ್‌ನಲ್ಲಿ ರಾಜಕಾರಣಿಗಳು, ಉದ್ಯಮಿಗಳು ವಾಸ್ತವ್ಯ ಹೂಡಿದ್ದರು ಎಂದು ಮೂಲಗಳು ತಿಳಿಸಿವೆ.

‘ಹೋಟೆಲ್‌ ಒಳಗಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಭದ್ರತಾ ಪಡೆ ಸಿಬ್ಬಂದಿ ಈ ಪ್ರದೇಶವನ್ನು ಸುತ್ತುವರಿದಿದ್ದಾರೆ’ ಎಂದು ಪ್ರತ್ಯಕ್ಷದರ್ಶಿ ಮುನ್ನಾ ಅಬ್ದಿರೆಹಮಾನ್‌ ತಿಳಿಸಿದರು.

ಅಫ್ಘಾನಿಸ್ತಾನದಲ್ಲಿ ಹೋಟೆಲ್‌ ಮೇಲೆ ದಾಳಿ: 3 ಸಾವು
ಹೆರಾತ್‌(ಎಎಫ್‌ಪಿ):
ಪಶ್ಚಿಮ ಅಫ್ಘಾನಿಸ್ತಾನದ ಬದ್ಘೀಸ್‌ ಪ್ರಾಂತದ ರಾಜಧಾನಿ ಖಾಲಾ ಇ ನಾವ್‌ನಲ್ಲಿ, ಹೋಟೆಲ್‌ ಮೇಲೆ ಶನಿವಾರ ಅಪರಿಚಿತ ಗುಂಪೊಂದು ಗುಂಡಿನ ದಾಳಿ ನಡೆಸಿದ್ದು, ಮೂವರುಭದ್ರತಾ ಸಿಬ್ಬಂದಿಮೃತಪಟ್ಟಿದ್ದಾರೆ.

ಶನಿವಾರ ಮಧ್ಯಾಹ್ನ ಪೊಲೀಸ್‌ ಚೆಕ್‌ಪೋಸ್ಟ್‌ಮೇಲೆ ದಾಳಿ ನಡೆಸಿದ್ದ ದಾಳಿಕೋರರು, ನಂತರ ಆತ್ಮಾಹುತಿ ಬಾಂಬ್‌ ಜತೆಗೆ ಹೋಟೆಲ್‌ ಒಳಗೆ ಪ್ರವೇಶಿಸಿದ್ದರು. ಹೋಟೆಲ್‌ ಸುತ್ತಮುತ್ತಲಿನ ಶಾಲೆಗಳಿಂದ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪೊಲೀಸರು ಹೋಟೆಲ್‌ ಸುತ್ತುವರಿದಿದ್ದಾರೆ’ ಎಂದು ಬದ್ಘೀಸ್ ಪ್ರಾಂತೀಯ ಸಮಿತಿ ಮುಖ್ಯಸ್ಥ ಅಜೀಜ್‌ ಬೆಕ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.