ವಾಷಿಂಗ್ಟನ್ (ಪಿಟಿಐ): ಮುಂಬೈಯಲ್ಲಿ 26/11 ರ ದಾಳಿ ಬಳಿಕ ಭಾರತ ಕಠೋರವಾಗಿ ಪ್ರತಿಕ್ರಿಯಿಸಿದ್ದರಿಂದ ಕಂಗಾಲಾಗಿದ್ದ ಪಾಕಿಸ್ತಾನವು ತರಾತುರಿಯಲ್ಲಿ ಅಮೆರಿಕ, ಚೀನಾ ಮತ್ತು ಸೌದಿಅರೆಬಿಯಾಕ್ಕೆ ತುರ್ತು ದೂರವಾಣಿ ಕರೆ ಮಾಡಿ ಭಾರತವು ಯುದ್ಧ ಮಾಡಲು ನಿರ್ಧರಿಸಿದೆ ಎಂದು ತಿಳಿಸಿತ್ತು.
ಪಾಕಿಸ್ತಾನದ ಉನ್ನತ ಅಧಿಕಾರಿಗಳು ಶ್ವೇತಭವನಕ್ಕೆ ದೂರವಾಣಿ ಕರೆ ಮಾಡಿ ಭಾರತವು ಯುದ್ಧ ಮಾಡುವ ಬೆದರಿಕೆ ಹಾಕಿದೆ ಎಂದು ತಿಳಿಸಿದ್ದರು. ಈ ವಿಷಯವನ್ನು ಅಧ್ಯಕ್ಷರ ಸಹಾಯಕರು ತಮಗೆ ಆತಂಕದಿಂದ ತಿಳಿಸಿದ್ದರು ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಂಡೋಲಿಸಾ ರೈಸ್ ಅವರು ತಮ್ಮ ಹೊಸ ಪುಸ್ತಕ `ನೋ ಹೈ ಆನರ್~ನಲ್ಲಿ ತಿಳಿಸಿದ್ದಾರೆ. ಮುಂಬೈ ದಾಳಿಯ ನಂತರ ತಾವು ಭಾರತದ ಪ್ರಧಾನಿ ಮತ್ತು ವಿದೇಶಾಂಗ ಸಚಿವರ ಜತೆ ನಡೆಸಿದ ಮಾತುಕತೆಯಲ್ಲಿ ಯುದ್ಧದ ಮಾತು ಪ್ರಸ್ತಾಪವಾಗಿರಲಿಲ್ಲ. ಬದಲಿಗೆ ಪಾಕಿಸ್ತಾನವು ಭಯೋತ್ಪಾದಕ ಕೃತ್ಯದ ಹೊಣೆ ಹೊತ್ತುಕೊಂಡು ಇಂತಹ ಕೃತ್ಯ ಎಸಗುವವರನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿಲಾಗಿತ್ತು ಎಂದು ರೈಸ್ ತಿಳಿಸಿದ್ದಾರೆ.
ಭಾರತದ ಆಗಿನ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಶಿ ಅವರಿಗೆ ಕಠೋರ ಪದಗಳಿಂದ ಎಚ್ಚರಿಕೆ ನೀಡಿದ್ದರಿಂದ ಅವರು ಗಾಬರಿಯಾಗಿ ಇನ್ನೇನು ಭಾರತದ ಸೇನೆಯು ಪಾಕಿಸ್ತಾನದ ಮೆಲೆ ಎರಗಲಿದೆ ಎಂದು ಭಯಪಟ್ಟಿದ್ದರು. ಆತಂಕಗೊಂಡ ಪಾಕಿಸ್ತಾನ ತನ್ನ ಮಿತ್ರ ರಾಷ್ಟ್ರಗಳಿಗೆ ಯುದ್ಧದ ಭೀತಿಯನ್ನು ಹರಡಿಸಿತ್ತು ಎಂದು ರೈಸ್ ಅವರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
ಸುದ್ದಿ ಗೊತ್ತಾದ ಕೂಡಲೇ ತಾವು ಪ್ರಣವ್ ಮುಖರ್ಜಿ ಅವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಅವರು ಎಷ್ಟೇ ಪ್ರಯತ್ನಿಸಿದರೂ ದೂರವಾಣಿಗೆ ಸಿಗದ ಕಾರಣ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ ಮತ್ತು ಯುದ್ಧದ ಸಿದ್ಧತೆ ನಡೆದಿರಬಹುದು ಎಂದು ತಾವೂ ಆ ಕ್ಷಣದಲ್ಲಿ ಭಾವಿಸಿದ್ದಾಗಿ ರೈಸ್ ಅಂದಿನ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ರೈಸ್ ಬರೆದಿರುವ 766 ಪುಟಗಳ ಈ ಪುಸ್ತಕವು ಮುಂದಿನ ವಾರ ಬಿಡುಗಡೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.