ADVERTISEMENT

ನಿಜ್ಜರ್ ಕೊಲೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ಪಿಟಿಐ
Published 4 ಮೇ 2024, 2:26 IST
Last Updated 4 ಮೇ 2024, 2:26 IST
<div class="paragraphs"><p>ಹರ್ದೀಪ್ ಸಿಂಗ್ ನಿಜ್ಜರ್‌</p></div>

ಹರ್ದೀಪ್ ಸಿಂಗ್ ನಿಜ್ಜರ್‌

   

- ರಾಯಿಟರ್ಸ್ ಚಿತ್ರ

ಒಟ್ಟಾವಾ/ನ್ಯೂಯಾರ್ಕ್‌: ಕೆನಡಾ ನಿವಾಸಿ, ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿ ಮೂವರು ಭಾರತೀಯ ಪ್ರಜೆಗಳನ್ನು ಕೆನಡಾ ಅಧಿಕಾರಿಗಳು ಬಂಧಿಸಿದ್ದಾರೆ.

ADVERTISEMENT

‘ಪ್ರಕರಣ ಕುರಿತ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಹೇಳಿದ್ದಾರೆ.

ಕರಣ್ ಬ್ರಾರ್ (22), ಕಮಲ್‌ಪ್ರೀತ್ ಸಿಂಗ್ (22) ಮತ್ತು ಕರಣ್‌ಪ್ರೀತ್ ಸಿಂಗ್ (28) ಬಂಧಿತರು. ಎಡ್ಮಂಟನ್‌ನಲ್ಲಿ ನೆಲೆಸಿರುವ ಈ ಮೂವರು ಭಾರತೀಯ ಪ್ರಜೆಗಳ ವಿರುದ್ಧ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.

ನಿಜ್ಜರ್ ಹತ್ಯೆಗೆ ಸಂಬಂಧಿಸಿ ಈ ಮೂವರನ್ನು ಬ್ರಿಟಿಷ್ ಕೊಲಂಬಿಯಾ ಮತ್ತು ಆಲ್ಬರ್ಟಾ ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ (ಆರ್‌ಸಿಎಂಪಿ) ಹಾಗೂ ಎಡ್ಮಂಟನ್ ಪೊಲೀಸ್ ಸರ್ವಿಸ್‌ ಸದಸ್ಯರ ನೆರವಿನಿಂದ ಐಎಚ್ಐಟಿ ತನಿಖಾಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಬಂಧಿಸಿದರು.

ಈ ಮೂವರು, 2023ರ ಜೂನ್ 18ರಂದು ಬ್ರಿಟಿಷ್ ಕೊಲಂಬಿಯಾದ ಸರ‍್ರೆಯಲ್ಲಿನ ಗುರುದ್ವಾರದ ಹೊರಗೆ ನಿಜ್ಜರ್ (45) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಬಂಧಿತರು,ಈ ಕೃತ್ಯಕ್ಕೆ ಭಾರತ ಸರ್ಕಾರ ನಿಯೋಜಿಸಿದ್ದ ಹಂತಕ ತಂಡದ ಸದಸ್ಯರು ಎಂಬುದಾಗಿ ಕೆನಡಾ ಶಂಕಿಸಿದೆ.

ನ್ಯಾಯಾಲಯದ ದಾಖಲೆಗಳ ಪ್ರಕಾರ, ಕೊಲೆಯ ಆರೋಪವನ್ನು ಬ್ರಾರ್ ಮೇಲೆ ಹೊರಿಸಲಾಗಿದೆ. ಬ್ರಾರ್‌, 2023ರ ಮೇ 1ರಂದು ಎಡ್ಮಂಟನ್ ಮತ್ತು ಸರ‍್ರೆಯಲ್ಲಿ ಕೊಲೆಗೆ ಸಂಚು ರೂಪಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

‘ಕೆನಡಾ ಪ್ರಜೆ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ’ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ)  ಹೇಳಿದೆ.

‘ತನಿಖೆ ಇಲ್ಲಿಗೆ ಮುಗಿಯುವುದಿಲ್ಲ. ಈ ನರಹತ್ಯೆಯಲ್ಲಿ ಇತರರು ಪಾತ್ರ ವಹಿಸಿರುವುದು ನಮಗೆ ಗೊತ್ತಿದೆ. ಇದರಲ್ಲಿ ಭಾಗಿಯಾದ ಎಲ್ಲರನ್ನೂ ಗುರುತಿಸಿ ಬಂಧಿಸಲು ನಾವು ಬದ್ಧರಾಗಿದ್ದೇವೆ’ ಎಂದು ತನಿಖಾ ತಂಡದ (ಐಎಚ್‌ಐಟಿ) ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

‘ಪೊಲೀಸರು ಈ ವರೆಗೆ ಸಂಗ್ರಹಿಸಿದ ಸಾಕ್ಷ್ಯಗಳ ಸ್ವರೂಪದ ಬಗ್ಗೆ ಯಾವುದೇ ಮಾಹಿತಿ ನೀಡಲಾಗದು. ನಿಜ್ಜರ್ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆಯೂ ಪ್ರತಿಕ್ರಿಯಿಸಲಾಗದು’ ಎಂದು ಆರ್‌ಸಿಎಂಪಿ ಸಹಾಯಕ ಕಮಿಷನರ್ ಡೇವಿಡ್ ಟೆಬೌಲ್ ಹೇಳಿದ್ದಾರೆ.

ಕೆನಡಾದಲ್ಲಿ ಭಾರತೀಯ ‘ಸ್ಲೀಪರ್ ಸೆಲ್‌ ಏಜೆಂಟ್’ ಇದ್ದಾರೆಯೇ ಎಂಬ ಪ್ರಶ್ನೆಗೆ ಟೆಬೌಲ್, ‘ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ತನಿಖೆ ಪ್ರಗತಿಯಲ್ಲಿದೆ’ ಎಂದು ಪ್ರತಿಕ್ರಿಯಿಸಿರುವುದಾಗಿ ‘ಸಿಬಿಸಿ ನ್ಯೂಸ್’ ವರದಿ ಮಾಡಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಸಂಭಾವ್ಯ ಪಾತ್ರವಿದೆ ಎಂದು ಆರೋಪಿಸಿದ ನಂತರ, ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ತೀವ್ರ ಬಿಗಡಾಯಿಸಿದ್ದವು. ಟ್ರುಡೊ ಅವರ ಆರೋಪಗಳನ್ನು ಭಾರತ ‘ಅಸಂಬದ್ಧ’ ಮತ್ತು ‘ಪ್ರಚೋದನೀಯ’ ಎಂದು ತಳ್ಳಿಹಾಕಿತ್ತು.

ಖಾಲಿಸ್ತಾನಿ ಪ್ರತ್ಯೇಕತಾವಾದಿಯಾದ ನಿಜ್ಜರ್‌ ಭಯೋತ್ಪಾದನೆಯ ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ.

‘ಶಂಕಿತರು ವಿದ್ಯಾರ್ಥಿ ವೀಸಾ ಮೇಲೆ ಕೆನಡಾ ಪ್ರವೇಶಿಸಿದ್ದರು’

‘ನಿಜ್ಜರ್‌ ಹತ್ಯೆ ಪ್ರಕರಣದ ಶಂಕಿತರು ವಿದ್ಯಾರ್ಥಿ ವೀಸಾಗಳ ಮೇಲೆ ಕೆನಡಾ ಪ್ರವೇಶಿಸಿದ್ದಾರೆ. ಆದರೆ, ಅವರು ನಿಜ್ಜರ್‌ಗೆ ಗುಂಡು ಹಾರಿಸಿದಾಗ ಭಾರತೀಯ ಗುಪ್ತಚರ ಸಂಸ್ಥೆಯ ನಿರ್ದೇಶನದಂತೆ ಕೆಲಸ ಮಾಡಿರಬಹುದು’ ಎಂದು ಮೂಲಗಳನ್ನು ಉಲ್ಲೇಖಿಸಿ ‘ಗ್ಲೋಬಲ್ ನ್ಯೂಸ್‌’ ವರದಿ ಮಾಡಿದೆ. 

‘ಈ ಮೂವರೂ ಭಾರತೀಯ ಪ್ರಜೆಗಳಾಗಿದ್ದು, ಕಳೆದ 3 ಅಥವಾ 5 ವರ್ಷಗಳಿಂದ ಕೆನಡಾದಲ್ಲಿ ಕಾಯಂ ಅಲ್ಲದ ನಿವಾಸಿಗಳಾಗಿ ವಾಸಿಸುತ್ತಿದ್ದಾರೆ. ನಿಜ್ಜರ್ ಸಾವಿನ ತನಿಖೆಯ ಮೊದಲು ಶಂಕಿತರ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ’ ಎಂದು ಐಎಚ್‌ಐಟಿ ಉಸ್ತುವಾರಿ ಅಧಿಕಾರಿ ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಸ್ಪಷ್ಟಪಡಿಸಿದರು.

‘ಐಎಚ್‌ಐಟಿ ತನ್ನ ತನಿಖೆ ಮುಂದುವರೆಸುವ ಭರವಸೆಯಲ್ಲಿ ಆರೋಪಿಗಳ ಭಾವಚಿತ್ರಗಳನ್ನು ಬಿಡುಗಡೆ ಮಾಡುತ್ತಿದೆ. ನಿಜ್ಜರ್‌ ಹತ್ಯೆಗೂ ವಾರಗಳ ಮೊದಲು ಅಥವಾ ನಂತರದಲ್ಲಿ ಈ ವ್ಯಕ್ತಿಗಳನ್ನು ಸರ‍್ರೆಯಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾರಾದರೂ ನೋಡಿರಬಹುದು. ಈ ಬಗ್ಗೆ ಮಾಹಿತಿ ಇರುವ ಯಾರು ಬೇಕಾದರೂ ಐಎಚ್‌ಐಟಿಯನ್ನು ಸಂಪರ್ಕಿಸಲು ಮನವಿ ಮಾಡಿದ್ದೇವೆ. ಭಾರತದೊಂದಿಗೆ ಸಮನ್ವಯವು ಕಳೆದ ಹಲವಾರು ವರ್ಷಗಳಿಂದ ಸವಾಲಿನ ಮತ್ತು ಕಷ್ಟಕರವಾಗಿದೆ. ಸಿಖ್ ಸಮುದಾಯದ ಬೆಂಬಲ ಇಲ್ಲದೆಯೇ ತನಿಖೆಯು ಈ ಹಂತ ತಲುಪುತ್ತಿರಲಿಲ್ಲ’ ಎಂದು ಅವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಡೊಮಿನಿಕ್ ಲೆಬ್ಲಾಂಕ್, ಈ ಪ್ರಕರಣದಲ್ಲಿ ಭಾರತ ಸರ್ಕಾರದ ನಂಟು ಇರುವುದನ್ನು ಖಚಿತಪಡಿಸಲು ನಿರಾಕರಿಸಿದರು. ಇಂತಹ ಪ್ರಶ್ನೆಗಳಿಗೆ ಆರ್‌ಸಿಎಂಪಿ ಉತ್ತರಿಸಲಿದೆ ಎಂದೂ ಅವರು ಹೇಳಿದರು.

‘ಪ್ರಭಾವ ಬೀರಲು ಭಾರತ ಯತ್ನ’

ಒಟ್ಟಾವಾ: ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ಮೇಲಿನ ಆತಂಕದಿಂದಾಗಿ ಕೆನಡಾದಲ್ಲಿನ ಭಾರತೀಯ ಪ್ರಜೆಗಳು ಹಾಗೂ ಅಧಿಕಾರಿಗಳು ಇಲ್ಲಿನ ಸಮುದಾಯಗಳು ಮತ್ತು ರಾಜಕಾರಣದ ಮೇಲೆ ಪ್ರಭಾವ ಬೀರುವ  ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಪತ್ತೆಹಚ್ಚಿರುವುದಾಗಿ ಕೆನಡಾ ಹೇಳಿಕೊಂಡಿದೆ.

ಸ್ವತಂತ್ರ ವಿಚಾರಣೆಯ ನೇತೃತ್ವ ವಹಿಸಿರುವ ಕಮಿಷನರ್ ಮೇರಿ-ಜೋಸಿ ಹೊಗ್ ಅವರು ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಈ ಆಪಾದನೆ ಮಾಡಲಾಗಿದೆ.  ಕೆನಡಾದ 2019 ಮತ್ತು 2021ರ ಕೊನೆಯ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಸಾಕ್ಷ್ಯಗಳು ಸಿಕ್ಕಿವೆ. ಆದರೆ ಈ ಹಸ್ತಕ್ಷೇಪವು ಚುನಾವಣಾ ಫಲಿತಾಂಶಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ದೇಶದ ಚುನಾವಣಾ ವ್ಯವಸ್ಥೆಯು ದೃಢವಾಗಿತ್ತು ಎಂದು ಈ ವರದಿಯಲ್ಲಿ ಹೇಳಿದೆ.

ಕೆನಡಾದ ಚುನಾವಣೆಗಳಲ್ಲಿ ತಾನು ಹಸ್ತಕ್ಷೇಪ ಮಾಡಿದ್ದೇನೆ ಎನ್ನುವ ಆರೋಪಗಳನ್ನು ಭಾರತವು ಈ ಹಿಂದೆ ಆಧಾರರಹಿತ ಎಂದು ತಳ್ಳಿಹಾಕಿದೆ. ಜತೆಗೆ ತನ್ನ ಆಂತರಿಕ ವ್ಯವಹಾರಗಳಲ್ಲಿ ಕೆನಡಾ ಮಧ್ಯಪ್ರವೇಶಿಸುತ್ತಿರುವುದು ಪ್ರಮುಖ ವಿಷಯವಾಗಿದೆ ಎಂದೂ ಭಾರತ ಪ್ರತಿಪಾದಿಸಿದೆ.

ಶುಕ್ರವಾರ ಬಿಡುಗಡೆಯಾದ ಈ ವರದಿಯಲ್ಲಿ ಕೆನಡಾದ ಆಂತರಿಕ ವಿಚಾರದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿರುವ ಪ್ರಮುಖ ಅಪರಾಧಿ ವಿದೇಶವಾಗಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು (ಪಿಆರ್‌ಸಿ) ಗುರುತಿಸಲಾಗಿದೆ. 194 ಪುಟಗಳ ಈ ವರದಿಯಲ್ಲಿ ಭಾರತದ ಹೆಸರನ್ನು 43 ಬಾರಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.