ADVERTISEMENT

ಸಿಂಗಪುರ ತಲುಪಿದ ಭಾರತದ ಮೂರು ಹಡಗುಗಳು

ಪಿಟಿಐ
Published 7 ಮೇ 2024, 14:42 IST
Last Updated 7 ಮೇ 2024, 14:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಂಗಪುರ (ಪಿಟಿಐ): ದಕ್ಷಿಣ ಚೀನಾ ಸಮುದ್ರದ ವ್ಯಾಪ್ತಿಯಲ್ಲಿ ಕಾರ್ಯತಂತ್ರಕ್ಕಾಗಿ ನಿಯೋಜನೆಗೊಳ್ಳಲು ಭಾರತೀಯ ನೌಕಾಪಡೆಯ ಮೂರು ಹಡಗುಗಳು ಮಂಗಳವಾರ ಸಿಂಗಪುರವನ್ನು ತಲುಪಿದವು.

‘ನೌಕಾಪಡೆಗೆ ಸೇರಿದ ದೆಹಲಿ, ಶಕ್ತಿ ಮತ್ತು ಕಿಲ್ತಾನ್ ಹಡಗುಗಳು ಅಡ್ಮಿರಲ್ ರಾಜೇಶ್‌ ಧನಖಢ್ ನೇತೃತ್ವದಲ್ಲಿ ಸಿಂಗಪುರ ತಲುಪಿವೆ’ ಎಂದು ನೌಕಾಪಡೆ ವಕ್ತಾರರು ‘ಎಕ್ಸ್‌’ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇಲ್ಲಿಗೆ ತಲುಪಿದ ಭಾರತ ನೌಕಾಪಡೆಯ ಮೂರು ಹಡಗುಗಳನ್ನು ಸಿಂಗಪುರ ನೌಕಾಪಡೆಯ ಸಿಬ್ಬಂದಿ ಹಾಗೂ ಭಾರತೀಯ ರಾಯಭಾರಿ ಬರಮಾಡಿಕೊಂಡರು.

ADVERTISEMENT

ದಕ್ಷಿಣ ಚೀನಾದ ಸಮುದ್ರ ವ್ಯಾಪ್ತಿಯಲ್ಲಿ ನೆರೆಯ ಚೀನಾ ತನ್ನ ಅಸ್ತಿತ್ವ ಬಲವರ್ಧನೆಗೆ ಒತ್ತು ನೀಡಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ. ಪ್ರಸ್ತುತ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಅಮೆರಿಕ ಬೆಂಬಲಿತ ಫಿಲಿಪ್ಪೀನ್ಸ್‌ನ ಹಡಗುಗಳು ನೆಲೆಗೊಂಡಿದ್ದು, ಚೀನಾದೊಟ್ಟಿಗೆ ಸಂಘರ್ಷಕ್ಕೆ ಮುಖಾಮುಖಿಯಾಗಿವೆ.

ದಕ್ಷಿಣ ಚೀನಾ ಸಮುದ್ರದ ವ್ಯಾಪ್ತಿಯಲ್ಲಿ 2ನೇ ಥಾಮಸ್‌ ಶೋಲ್‌ ದ್ವೀಪ ಭಾಗದ ಮೇಲೆ ಹಕ್ಕು ಸ್ಥಾಪಿಸಲು ಫಿಲಿಪ್ಪೀನ್ಸ್ ಯತ್ನಿಸುತ್ತಿದೆ. ಇದು ತನ್ನ ಗಡಿಗೆ ಸೇರಿದ್ದು ಚೀನಾ ಈಗಾಗಲೇ ಬಲವಾಗಿ ಪ್ರತಿಪಾದಿಸಿದೆ.

ಅಲ್ಲದೆ, ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಹಕ್ಕು ಪ್ರತಿಪಾದಿಸುತ್ತಿರುವ ಹಲವು ಭಾಗಗಳ ಮೇಲೆ ಫಿಲಿಪ್ಪೀನ್ಸ್, ಮಲೇಷ್ಯಾ, ಬ್ರುನೇಯಿ, ತೈವಾನ್‌ ಕೂಡ ಪ್ರತಿಯಾಗಿ ಹಕ್ಕು ಪ್ರತಿಪಾದಿಸಿವೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅನಿಶ್ಚಿತ ಸ್ಥಿತಿಯು ಮನೆಮಾಡಿದೆ.

ಭಾರತ ಹಾಗೂ ಸಿಂಗಪುರ ನಡುವಿನ ಸ್ನೇಹ ಸಂಬಂಧ ವರ್ಧನೆಯ ನಿಟ್ಟಿನಲ್ಲಿ ಈ ಹಡಗುಗಳ ನಿಯೋಜನೆಯು ಮುಖ್ಯವಾಗಿದೆ ಎಂದು ಭಾರತದ ರಕ್ಷಣಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.