ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ, ಸ್ಫೋಟಕಗಳಿಂದ ಭರ್ತಿಯಾಗಿದ್ದ ಟ್ರಕ್ ಅನ್ನು ಸೇನಾ ನೆಲೆಗೆ ನುಗ್ಗಿಸುವ ಮೂಲಕ ಉಗ್ರರು ಮಂಗಳವಾರ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 23 ಯೋಧರು ಮೃತಪಟ್ಟಿದ್ದಾರೆ.
ದಕ್ಷಿಣ ವಾಜಿರಿಸ್ತಾನ್ ವಲಯದಲ್ಲಿ ಭದ್ರತಾ ಪಡೆಗಳ ನೆಲೆಯನ್ನು ಗುರಿಯಾಗಿಸಿ ಕನಿಷ್ಠ ಆರು ಉಗ್ರರು ಈ ಕೃತ್ಯ ಎಸಗಿದ್ದಾರೆ. ಭದ್ರತಾ ನೆಲೆ ಪ್ರವೇಶಿಸುವ ಉಗ್ರರ ಯತ್ನವನ್ನು ಸಿಬ್ಬಂದಿ ತಡೆದಿದ್ದರು. ಅದನ್ನು ಮೀರಿ ಉಗ್ರರು ಟ್ರಕ್ ನುಗ್ಗಿಸಿದ್ದಾರೆ. ಸ್ಫೋಟದ ತೀವ್ರತೆಯಿಂದಾಗಿ ಕಟ್ಟಡ ಜಖಂಗೊಂಡಿದೆ. 23 ಯೋಧರು ಸ್ಥಳದಲ್ಲಿಯೇ ಸತ್ತಿದ್ದಾರೆ. ಆರು ಉಗ್ರರೂ ಹತರಾಗಿದ್ದಾರೆ.
‘ಹತರಾದ ಉಗ್ರರು ಈ ಹಿಂದೆಯೂ ನಡೆದಿದ್ದ ಹಲವು ಸ್ಫೋಟ ಕೃತ್ಯಗಳಿಗೆ ಕಾರಣರಾಗಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಸೇನೆಯ ಹೇಳಿಕೆ ತಿಳಿಸಿದೆ. ಕೃತ್ಯದ ಹಿಂದೆಯೇ ಜಿಲ್ಲೆಯಲ್ಲಿ ತುರ್ತು ಸ್ಥಿತಿ ಘೋಷಿಸಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಯಿತು.
17 ಉಗ್ರರು ಹತ: ಗುಪ್ತದಳ ಮೂಲಗಳನ್ನು ಆಧರಿಸಿ ಮಂಗಳವಾರ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 17 ಉಗ್ರರು ಹತರಾಗಿದ್ದಾರೆ. ಡೆರಾ ಇಸ್ಮಾಯಿಲ್ ಖಾನ್‌ನ ಡರಾಜಿಂದಾ ವಲಯದಲ್ಲಿ ಈ ಕಾರ್ಯಾಚರಣೆ ನಡೆಯಿತು ಎಂದು ಸೇನೆ ತಿಳಿಸಿದೆ.
ಕುಲಾಚಿ ವಲಯದಲ್ಲಿ ನಡೆದ ಇನ್ನೊಂದು ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಸತ್ತಿದ್ದು, ಇತರೆ ನಾಲ್ವರು ಉಗ್ರರನ್ನು ನಿಷ್ಕ್ರಿಯಗೊಳಿಸಿ, ವಶಕ್ಕೆ ಪಡೆಯಲಾಯಿತು ಎಂದು ತಿಳಿಸಿದೆ.
ದಾಳಿ ಹೊಣೆ ಹೊತ್ತ ಟಿಜೆಪಿ
ತೆಹ್ರೀಕ್ ಐ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಹೊಸದಾಗಿ ಸ್ಥಾಪನೆಯಾಗಿರುವ ಉಗ್ರರ ಸಂಘಟನೆ ತೆಹ್ರೀಕ್ ಇ ಜಿಹಾದ್ ಪಾಕಿಸ್ತಾನ್ (ಟಿಜೆಪಿ) ದಾಳಿ ಹೊಣೆಯನ್ನು ಹೊತ್ತುಕೊಂಡಿದೆ.
ಟಿಜೆಪಿ ವಕ್ತಾರ ಮುಲ್ಲಾ ಖಾಸಿಂ ಈ ದಾಳಿಯನ್ನು ಆತ್ಮಹತ್ಯಾ ಕಾರ್ಯಾಚರಣೆ (ಫಿದಾಯೆ) ಎಂದು ಹೇಳಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ಕೆಲ ಪ್ರಮುಖ ಭಯೋತ್ಪಾದಕ ದಾಳಿ ಕೃತ್ಯಗಳಲ್ಲಿಯೂ ಟಿಜೆಪಿ ಕೈವಾಡವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.