ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಹೊಸ ವರ್ಷದ ಪಾರ್ಟಿಯೊಂದರಲ್ಲಿ ಗುಂಡಿನ ದಾಳಿ ನಡೆದ ಪರಿಣಾಮ ಇಬ್ಬರು ಸಾವಿಗೀಡಾಗಿ, 8 ಮಂದಿ ಗಾಯಗೊಂಡಿರುವ ಘಟನೆ ಲಾಸ್ ಏಂಜಲೀಸ್‌ನ ನೆರೆಯ ವಾಣಿಜ್ಯ ಪ್ರದೇಶದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಮಧ್ಯರಾತ್ರಿ 1 ಗಂಟೆ ಹೊತ್ತಿಗೆ ಘಟನೆ ನಡೆದಿದ್ದು, ಗುಂಡಿನ ದಾಳಿಯಿಂದ ಭೀತಿಗೊಳಗಾಗಿ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಗಾಯಗೊಂಡಿರುವ ಜನ ಬೀದಿಗಳಲ್ಲಿ ಹಾಗೂ ಪಾದಾಚಾರಿ ಮಾರ್ಗದಲ್ಲಿ ಬಿದ್ದಿದ್ದರು ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆಯಲ್ಲಿ ಓರ್ವ ಪುರುಷ ಹಾಗೂ ಮಹಿಳೆ ಮೃತಪಟ್ಟಿದ್ದಾರೆ. ಪ್ರಾಥಮಿಕ ವರದಿಗಳ ವೇಳೆ 3 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಗಾಯಾಳುಗಳ ಆರೋಗ್ಯ ಪರಿಸ್ಥಿತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಗೋದಾಮುಗಳು ಮತ್ತು ವಾಣಿಜ್ಯ ಕಟ್ಟಡಗಳನ್ನು ಹೊಂದಿರುವ ಕೈಗಾರಿಕಾ ಪ್ರದೇಶದಲ್ಲಿ ನಡೆದ ಪಾರ್ಟಿಯಲ್ಲಿನ ವಿವಾದದಿಂದ ಶೂಟಿಂಗ್ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ. ಶಂಕಿತರ ಬಗ್ಗೆ ಯಾವುದೇ ಮಾಹಿತಿ ತಕ್ಷಣಕ್ಕೆ ಲಭಿಸಿಲ್ಲ.
ಹೌತೋನ್‌ನಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಲಾಸ್ ಏಂಜಲೀಸ್‌ನ ಕಾನೂನು ಜಾರಿ ವಿಭಾಗ ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.
ನಾಲ್ಕು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಈ ಪ್ರಕರಣದಲ್ಲೂ ಶಂಕಿತರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.