ADVERTISEMENT

ಭೌತವಿಜ್ಞಾನ: ಮೂವರು ವಿಜ್ಞಾನಿಗಳಿಗೆ ನೊಬೆಲ್‌

ಎಪಿ
Published 3 ಅಕ್ಟೋಬರ್ 2023, 15:26 IST
Last Updated 3 ಅಕ್ಟೋಬರ್ 2023, 15:26 IST
 ಆ್ಯನ್ ಲಿ ಹುಯಿಲಿಯರ್
 ಆ್ಯನ್ ಲಿ ಹುಯಿಲಿಯರ್   

ಸ್ಟಾಕ್‌ಹೋಮ್: ಎಲೆಕ್ಟ್ರಾನ್‌ಗಳ ಚಲನೆ ಮತ್ತು ವರ್ತನೆ ಕುರಿತು ಹೊಸ ಒಳನೋಟ ಒದಗಿಸುವ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳನ್ನು ಈ ಬಾರಿಯ ಭೌತವಿಜ್ಞಾನ ಕ್ಷೇತ್ರದ ನೊಬೆಲ್‌ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಶ್‌ ಅಕಾಡೆಮಿ ಮಂಗಳವಾರ ಘೋಷಿಸಿದೆ.

ಅಮೆರಿಕದ ಓಹಿಯೊ ಸ್ಟೇಟ್‌ ಯುನಿವರ್ಸಿಟಿಯ ಪಿಯರಿ ಅಗೊಸ್ಟಿನಿ, ಜರ್ಮನಿಯ ಮ್ಯುನಿಕ್‌ನ ಮ್ಯಾಕ್ಸ್‌ ಪ್ಲಾಂಕ್ ಇನ್ಸ್‌ಟಿಟ್ಯೂಟ್‌ ಆಫ್‌ ಕ್ವಾಂಟಮ್ ಆಪ್ಟಿಕ್ಸ್ ಅಂಡ್ ಲುಡ್ವಿಗ್ ಮ್ಯಾಕ್ಸ್‌ ಮಿಲಿಯನ್ ಯುನಿವರ್ಸಿಟಿಯ ಫೆರೆಂಕ್ ಕ್ರೌಜ್ ಹಾಗೂ ಸ್ವೀಡನ್‌ ಲುಂಡ್ ಯುನಿವರ್ಸಿಟಿಯ ಆ್ಯನ್ ಲಿ ಹುಯಿಲಿಯರ್ ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಭಾಜನರಾದ ವಿಜ್ಞಾನಿಗಳಾಗಿದ್ದಾರೆ.

‘ಅಣುಗಳ‌ಲ್ಲಿ ಎಲೆಕ್ಟ್ರಾನ್‌ಗಳು ಹೇಗೆ ವರ್ತಿಸುತ್ತವೆ. ಕ್ಷಣಾರ್ಧದಲ್ಲಿ ‌ಎಲೆಕ್ಟ್ರಾನ್‌ಗಳು ಚಲಿಸುವ ಬಗೆ ಹಾಗೂ ಈ ಪ್ರಕ್ರಿಯೆಯಲ್ಲಿ ಆಗುವ ಶಕ್ತಿಯ ಬದಲಾವಣೆಯನ್ನು ಗುರುತಿಸಲು ಈ ವಿಜ್ಞಾನಿಗಳು ನಡೆಸಿದ ಸಂಶೋಧನೆ ನಮಗೆ ಹೊಸ ಅಳತೆಗೋಲನ್ನು ಒದಗಿಸಿದೆ‘ ಎಂದು ಅಕಾಡೆಮಿ ಹೇಳಿದೆ.

ADVERTISEMENT
ಫೆರೆಂಕ್‌ ಕ್ರೌಜ್

‘ಸೂಕ್ಷ್ಮಾತಿಸೂಕ್ಷ್ಮ ಕಣಗಳ ಅಧ್ಯಯನ ಒಳಗೊಂಡ ವಿಜ್ಞಾನದ ಈ ಶಾಖೆಯು ಬ್ರಹ್ಮಾಂಡವನ್ನು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ. ಜೊತೆಗೆ, ಎಲೆಕ್ಟ್ರಾನಿಕ್ಸ್‌ ಕುರಿತು ಹೊಸ ಒಳನೋಟ ನೀಡುವ ಜೊತೆಗೆ ರೋಗ ಪತ್ತೆ ಕ್ಷೇತ್ರದಲ್ಲಿ ಈ ಸಂಶೋಧನೆ ಪ್ರಮುಖ ಪಾತ್ರ ವಹಿಸುವ ಭರವಸೆ ಇದೆ‘ ಎಂದು ಅಕಾಡೆಮಿ ತಿಳಿಸಿದೆ. 

ಪಿಯರಿ ಅಗೋಸ್ಟಿನಿ

ಆ್ಯನ್‌ ಅವರು ನೊಬೆಲ್‌ ಪುರಸ್ಕಾರಕ್ಕೆ ಭಾಜನರಾಗಿರುವ ಐದನೇ ಮಹಿಳೆ ಎನಿಸಿದ್ದಾರೆ.

ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಘೋಷಣೆಯಾದ ನಂತರ ಪ್ರತಿಕ್ರಿಯಿಸಿದ ಅವರು, ‘ನನಗೆ ನಂಬಲು ಆಗುತ್ತಿಲ್ಲ. ಈ ಪ್ರತಿಷ್ಠಿತ ಪುರಸ್ಕಾರವನ್ನು ಪಡೆಯುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಈ ಪುರಸ್ಕಾರಕ್ಕೆ ಭಾಜನರಾದ ಮಹಿಳೆಯರ ಸಂಖ್ಯೆಯೂ ಕಡಿಮೆ. ಹೀಗಾಗಿ, ಪುರಸ್ಕಾರಕ್ಕೆ ಭಾಜನಳಾಗಿದ್ದು ವಿಶೇಷವೇ ಸರಿ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.