ಪೇಶಾವರ: ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಬುಡಕಟ್ಟು ಸಮುದಾಯಗಳ ನಡುವೆ ನಡೆಯುತ್ತಿರುವ ಘರ್ಷಣೆಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದು, 145ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಪ್ರಕರಣ ಪಾಕಿಸ್ತಾನದ ಕುರ್ರಮ್ ಜಿಲ್ಲೆಯಲ್ಲಿ ವರದಿಯಾಗಿದೆ.
ಜಿಲ್ಲೆಯ ಬೊಷೆರಾ ಎಂಬ ಗ್ರಾಮದಲ್ಲಿ 5 ದಿನಗಳ ಹಿಂದೆಯೇ ಘರ್ಷಣೆ ಆರಂಭವಾಗಿದೆ. ನಂತರ ಇತರ ಗ್ರಾಮಗಳಿಗೂ ವ್ಯಾಪಿಸಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ಸೇರಿದ ಹಾಗೂ ಅಫ್ಗಾನಿಸ್ತಾನ ಗಡಿಗೆ ಹತ್ತಿರದಲ್ಲಿರುವ ಕುರ್ರಮ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. 145 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘರ್ಷಣೆ ವೇಳೆ ಭಾರಿ ಶಸ್ತ್ರಾಸ್ತ್ರಗಳು, ರಾಕೆಟ್ ಲಾಂಚರ್‌ಗಳು, ಶೆಲ್‌ಗಳನ್ನು ಬಳಸಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಹೀಗಾಗಿ, ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಶಿಯಾ ಮತ್ತು ಸುನ್ನಿ ಬುಡಕಟ್ಟು ಜನರ ನಡುವಿನ ಘರ್ಷಣೆಯನ್ನು ಬುಡಕಟ್ಟು ಸಮದಾಯಗಳ ನಾಯಕರು, ಮಿಲಿಟರಿ, ಪೊಲೀಸರು ಹಾಗೂ ಜಿಲ್ಲಾಡಳಿತದ ಸಹಕಾರದಿಂದ ಕೆಲವಡೆ ತಡೆಯಲಾಗಿದೆ. ಇನ್ನೂ ಕೆಲವಡೆ ಹಿಂಸಾಚಾರ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಲಭೆಪೀಡಿತ ಪ್ರದೇಶಗಳಿಗೆ ಭಾರಿ ಸಂಖ್ಯೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.