ಕರಾಚಿ:ಪಾಕಿಸ್ತಾನದ ಜಲ ಪ್ರದೇಶ ಪ್ರವೇಶಿಸಿದ 34 ಭಾರತೀಯ ಮೀನುಗಾರರನ್ನು ಅಲ್ಲಿನ ಸಾಗರ ಭದ್ರತಾ ಪಡೆ ಮಂಗಳವಾರ ರಾತ್ರಿ ಬಂಧಿಸಿದೆ.
‘ಆರು ಬೋಟ್‌ಗಳನ್ನೂ ವಶಕ್ಕೆ ಪಡೆಯಲಾಗಿದೆ. ಬಂಧಿತ ಮೀನುಗಾರರನ್ನು ಸ್ಥಳೀಯ ಬಂದರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅವರನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಲಾಗುವುದು’ ಎಂದುಸಾಗರ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.
ಜನವರಿ ನಂತರ ಇದೇ ಮೊದಲು: ಜನವರಿ ತಿಂಗಳಲ್ಲಿ ಐವರು ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಬಂಧಿಸಿತ್ತು. ನಂತರ ಈವರೆಗೆ ಮೀನುಗಾರರನ್ನು ಬಂಧಿಸಿರುವುದು ಇದೇ ಮೊದಲು.
250 ಮೀನುಗಾರರ ಬಿಡುಗಡೆ ಮಾಡಿದ್ದ ಪಾಕ್:ಶಾಂತಿಯ ಸಂಕೇತವಾಗಿ 360 ಮೀನುಗಾರರ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಕಳೆದ ತಿಂಗಳು ತಿಳಿಸಿತ್ತು. ಬಳಿಕ ಕರಾಚಿಯ ಲಾಂಧೀ ಮತ್ತು ಮಲೀರ್ ಜೈಲುಗಳಲ್ಲಿದ್ದ 250 ಭಾರತೀಯ ಮೀನುಗಾರರನ್ನಷ್ಟೇ ಬಿಡುಗಡೆ ಮಾಡಿತ್ತು. ಮೂರು ಹಂತಗಳಲ್ಲಿ ಮೀನುಗಾರರ ಬಿಡುಗಡೆ ಮಾಡಲಾಗಿತ್ತು.
ಮೀನುಗಾರಿಕೆ ವೇಳೆ ಆಕಸ್ಮಿಕವಾಗಿ ಜಲ ಗಡಿ ದಾಟುವ ಭಾರತ ಮತ್ತು ಪಾಕಿಸ್ತಾನದ ಮೀನುಗಾರರು ಆಗಾಗ ಬಂಧನಕ್ಕೊಳಗಾಗುತ್ತಿರುತ್ತಾರೆ. ಆದರೆ, ಇತ್ತೀಚಿನ ಕೆಲವು ತಿಂಗಳುಗಳಲ್ಲಿ 30ಕ್ಕೂ ಹೆಚ್ಚು ಮೀನುಗಾರರ ಬಂಧನವಾಗಿರುವುದು ಇದೇ ಮೊದಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.