ADVERTISEMENT

ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರ: ಕನಿಷ್ಠ 12 ಸಾವು

ಏಜೆನ್ಸೀಸ್
Published 19 ನವೆಂಬರ್ 2024, 15:38 IST
Last Updated 19 ನವೆಂಬರ್ 2024, 15:38 IST
   

ಕೀವ್‌: ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ 1,000 ದಿನ ತುಂಬಿದೆ. ಈ ನಡುವೆ, ಮೂರು ದಿನಗಳಲ್ಲಿ ಮೂರನೇ ಬಾರಿ ರಷ್ಯಾ ಪಡೆಗಳು ನಡೆಸಿರುವ ದಾಳಿಯಲ್ಲಿ ಮಗು ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಉತ್ತರ ಭಾಗದಲ್ಲಿರುವ ಸಮಿ ಪ್ರದೇಶದ ಮೇಲೆ ಶಹೀದ್‌ ಡ್ರೋನ್‌ ಬಳಸಿ ರಷ್ಯಾ ನಡೆಸಿರುವ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ 11 ಮಂದಿ ಗಾಯಗೊಂಡಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಮತ್ತಷ್ಟು ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ಉಕ್ರೇನ್‌ನ ರಕ್ಷಣಾ ಸೇವೆಗಳ ಅಧಿಕಾರಿಗಳು ಹೇಳಿದ್ದಾರೆ.

ಲುಕೀವ್‌ ಪಟ್ಟಣದ ಶೈಕ್ಷಣಿಕ ಸಂಸ್ಥೆಯೊಂದರ ಮೇಲೆ ಸೋಮವಾರ ತಡರಾತ್ರಿ ದಾಳಿ ನಡೆಸಲಾಗಿದೆ. 

ADVERTISEMENT

‘ರಷ್ಯಾ ಪಡೆಗಳು ಸರಣಿ ವೈಮಾನಿಕ ದಾಳಿಗಳನ್ನು ನಡೆಸುತ್ತಿವೆ. ಇದು ಯುದ್ಧ ನಿಲ್ಲಿಸಲು ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಆಸಕ್ತಿ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

‘ರಷ್ಯಾ ನಡೆಸುವ ಪ್ರತಿ ಹೊಸ ದಾಳಿಯು ಪುಟಿನ್‌ ಅವರ ನಿಜವಾದ ಉದ್ದೇಶವನ್ನು ತೋರಿಸುತ್ತದೆ. ಅವರಿಗೆ ಯುದ್ಧ ಮುಂದುವರಿಸುವುದು ಬೇಕಾಗಿದೆ. ಶಾಂತಿ ಸ್ಥಾಪನೆ ಕುರಿತ ಮಾತುಗಳು ಅವರಿಗೆ ಆಸಕ್ತಿ ಮೂಡಿಸುವುದಿಲ್ಲ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.