ರಫಾ: ದಕ್ಷಿಣ ಗಾಜಾದ ಪ್ರಮುಖ ಆಸ್ಪತ್ರೆಯೊಂದರಲ್ಲಿ ಇಸ್ರೇಲ್ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಆಮ್ಲಜನಕ ಸ್ಥಗಿತವಾಗಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಅಲ್ಲಿಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಹಮಾಸ್ ಬಂಡುಕೋರರು ಒತ್ತೆಯಿರಿಸಿಕೊಂಡಿದ್ದ ಇಸ್ರೇಲಿ ಪ್ರಜೆಗಳ ಮೃತದೇಹಗಳನ್ನು ಖಾನ್ ಯೂನಿಸ್‌ನ ನಾಸ್ಸೆರ್ ಆಸ್ಪತ್ರೆಯಲ್ಲಿ ಅಡಗಿಸಲಾಗಿದೆ ಎಂಬ ಶಂಕೆ ಮೇರೆಗೆ ಇಸ್ರೇಲಿ ಪಡೆಗಳು ಶೋಧ ಕೈಗೊಂಡಿದ್ದವು.
ಇಸ್ರೇಲಿ ಪಡೆಗಳು, ಟ್ಯಾಂಕ್‌ಗಳು ಮತ್ತು ಸ್ನೈಪ್ಪರ್‌ಗಳು ಒಂದು ವಾರದಿಂದ ನಾಸ್ಸೆರ್ ಆಸ್ಪತ್ರೆಯನ್ನು ಸುತ್ತುವರೆದಿದ್ದವು. ಆಹಾರ, ನೀರು ಮತ್ತು ಇತರ ಅಗತ್ಯವಸ್ತುಗಳನ್ನು ಆಸ್ಪತ್ರೆಯೊಳಗೆ ಸಮರ್ಪಕವಾಗಿ ಸಾಗಿಸಲಾಗಲಿಲ್ಲ. ಹೊರಗಿನಿಂದ ನಡೆಸಿದ ದಾಳಿಗೆ ಆಸ್ಪತ್ರೆ ಒಳಗಿದ್ದ ಹಲವರು ಮೃತಪಟ್ಟರು ಎಂದು ಗಾಜಾದ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಕದನವಿರಾಮ ಮಾತುಕತೆಗೆ ಹಿನ್ನೆಡೆ: ಗಾಜಾದಲ್ಲಿ ಕದನವಿರಾಮ ಘೋಷಿಸಲು ನಡೆಯುತ್ತಿರುವ ಮಾತುಕತೆಗಳು ಸದ್ಯಕ್ಕೆ ಸ್ಥಗಿತವಾದಂತೆ ಕಂಡುಬಂದಿದೆ. ಕದನವಿರಾಮದ ಬಳಿಕ ಪ್ರತ್ಯೇಕ ‘ಪ್ಯಾಲೆಸ್ಟೀನಿಯನ್ ರಾಜ್ಯ’ ಸ್ಥಾಪಿಸುವ ಪ್ರಸ್ತಾವವನ್ನು ಅಮೆರಿಕವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಎದುರು ಇರಿಸಿತ್ತು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆ ಚರ್ಚೆ ನಡೆಸಿದ ಬಳಿಕ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ನೇತನ್ಯಾಹು, ‘ಪ್ಯಾಲೆಸ್ಟೀನ್ ಜೊತೆ ಶಾಶ್ವತವಾಗಿ ರಾಜಿ ಮಾಡಿಕೊಳ್ಳುವ ದಿಸೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಒತ್ತಾಯವನ್ನು ಇಸ್ರೇಲ್ ಒಪ್ಪಿಕೊಳ್ಳುವುದಿಲ್ಲ’ ಎಂದು ಬರೆದಿದ್ದಾರೆ.
‘ಇತರ ದೇಶಗಳು ಏಕಪಕ್ಷೀಯವಾಗಿ ‘ಪ್ರತ್ಯೇಕ ಪ್ಯಾಲೆಸ್ಟೀನಿಯನ್ ರಾಜ್ಯ’ವನ್ನು ಗುರುತಿಸಿದರೆ ಭಯೋತ್ಪಾದನೆಯನ್ನು ಪುರಸ್ಕರಿಸಿದಂತಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.