ನವದೆಹಲಿ: ಆಸ್ಟ್ರೇಲಿಯಾದ ‘ನ್ಯೂ ವರ್ಕಿಂಗ್ ಹಾಲಿಡೇ ಮೇಕರ್ ವೀಸಾ’ ಕಾರ್ಯಕ್ರಮದ ಅಡಿಯಲ್ಲಿ ಆಹ್ವಾನಿಸಲಾಗಿರುವ 1,000 ವೀಸಾಗಳಿಗೆ ಎರಡು ವಾರಗಳಲ್ಲಿ ಸುಮಾರು 40,000 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಆಸ್ಟ್ರೇಲಿಯಾದ ವಲಸೆ ಇಲಾಖೆಯ ಸಹಾಯಕ ಸಚಿವ ಮ್ಯಾಟ್ ಥಿಸಲ್‌ವೈಟ್ ತಿಳಿಸಿದ್ದಾರೆ.
ಆಸ್ಟ್ರೇಲಿಯನ್ ವರ್ಕಿಂಗ್ ಹಾಲಿಡೇ ಮೇಕರ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘18 ರಿಂದ 30 ವರ್ಷ ವಯಸ್ಸಿನ ಭಾರತೀಯರಿಗೆ ಆಸ್ಟ್ರೇಲಿಯಾದಲ್ಲಿ 12 ತಿಂಗಳವರೆಗೆ ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನ ನಡೆಸಲು ಈ ವೀಸಾ ಅವಕಾಶ ನೀಡುತ್ತದೆ. ಜತೆಗೆ ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ’ ಎಂದು ಹೇಳಿದರು.
‘ವೀಸಾಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅಕ್ಟೋಬರ್ 1ರಿಂದ ಪ್ರಾರಂಭಗೊಂಡಿದ್ದು, ತಿಂಗಳಾಂತ್ಯಕ್ಕೆ ಮುಕ್ತಾಯವಾಗಲಿದೆ. ಬಳಿಕ, ಅಭ್ಯರ್ಥಿಗಳನ್ನು ವ್ಯವಸ್ಥಿತವಾಗಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರು ಮುಂದಿನ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾಗೆ ತೆರಳಬಹುದು’ ಎಂದು ಥಿಸಲ್‌ವೈಟ್ ತಿಳಿಸಿದರು.
‘ನ್ಯೂ ವರ್ಕಿಂಗ್ ಹಾಲಿಡೇ ಮೇಕರ್ ವೀಸಾದಲ್ಲಿ ವಿಶೇಷವೆಂದರೆ ನೀವು ಮಾಡಬಹುದಾದ ಉದ್ಯೋಗಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. ವೀಸಾವು ಯುವ ಭಾರತೀಯರಿಗೆ ಆಸ್ಟ್ರೇಲಿಯಾದ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸದ ಅನುಭವವನ್ನು ಪಡೆಯಲು ಅವಕಾಶವನ್ನು ನೀಡುತ್ತದೆ. ಈ ಉಪಕ್ರಮವು ಉಭಯ ದೇಶಗಳ ನಡುವಿನ ನಿಕಟ ಮತ್ತು ಬೆಳೆಯುತ್ತಿರುವ ಸಂಬಂಧವನ್ನು ಪ್ರತಿಬಿಂಬಿಸುತ್ತದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.