ವಿಶ್ವಸಂಸ್ಥೆ, ಅಮೆರಿಕ: ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿರುವ ಉಯಿಘರ್ ಮುಸಲ್ಮಾನ ಸಮುದಾಯದ ಹಕ್ಕುಗಳನ್ನು ರಕ್ಷಿಸಬೇಕು ಎಂದು 43 ದೇಶಗಳು ಚೀನಾಗೆ ಕರೆ ನೀಡಿವೆ.
ವಿಶ್ವಸಂಸ್ಥೆ ಹಾಗೂ ವಿವಿಧ ಯೂರೋಪಿಯನ್ ಮತ್ತು ಏಷ್ಯಾದ ಸದಸ್ಯ ರಾಷ್ಟ್ರಗಳು ಸಹಿ ಮಾಡಿರುವ ಈ ಕುರಿತ ಜಂಟಿ ಹೇಳಿಕೆಯನ್ನು ವಿಶ್ವಸಂಸ್ಥೆಯು ಬಿಡುಗಡೆ ಮಾಡಿದೆ. ಈ ಹೇಳಿಕೆಗೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಉಯಿಘರ್ ಮುಸ್ಲಿಂ ಸಮುದಾಯದ ವಿಷಯದಲ್ಲಿ ಚೀನಾ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ಕಿರುಕುಳ ನೀಡುತ್ತಿದ್ದು, ಒತ್ತಾಯಪೂರ್ವಕವಾಗಿ ಕ್ರಿಮಿನಾಶಕ ನೀಡುತ್ತಿದ್ದು, ತಲೆಮರೆಸಿಕೊಳ್ಳಲು ಕಾರಣವಾಗುತ್ತಿದೆ ಎಂದು ಆರೋಪಿಸಲಾಗಿದೆ.
ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಭಾಗದ ಹೈಕಮಿಷನರ್ ಒಳಗೊಂಡಂತೆ ಸ್ವತಂತ್ರ ವೀಕ್ಷಕರು ಕೂಡಲೇ ಕ್ಸಿನ್‌ಜಿಯಾಂಗ್ ಪ್ರಾಂತ್ಯವನ್ನು ಪ್ರವೇಶಿಸಲು, ಅರ್ಥಪೂರ್ಣ ಮಾಹಿತಿಯನ್ನು ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ. ವಿಶ್ವಸಂಸ್ಥೆಯ ಈ ಹೇಳಿಕೆಯನ್ನು ಫ್ರಾನ್ಸ್‌ನ ಪ್ರತಿನಿಧಿ ಓದಿದರು.
ಕ್ಸಿನ್‌ಜಿಯಾಂಗ್‌ನ ಉಯಿಘರ್ ಸ್ವಾಯತ್ತ ವಲಯದ ಕುರಿತು ನಾವು ಮುಖ್ಯವಾಗಿ ಕಾಳಜಿ ಹೊಂದಿದ್ದೇವೆ. ವರದಿಗಳ ಪ್ರಕಾರ, ಅಲ್ಲಿದೊಡ್ಡ ಪ್ರಮಾಣದ ರಾಜಕೀಯ ಮರುಶಿಕ್ಷಣದ ಶಿಬಿರಗಳು ತಲೆ ಎತ್ತಿವೆ. ಜನರನ್ನು ಒತ್ತಾಯಪೂರ್ವಕವಾಗಿ ಹಿಡಿದಿಡಲಾಗಿದೆ ಎಂದು ಹೇಳಿಕೆಯಲ್ಲಿ ಆತಂಕವನ್ನು ವ್ಯಕ್ತಪಡಿಸಲಾಗಿದೆ.
ಈ ಆರೋಪಗಳನ್ನು ಚೀನಾ ಹಿಂದಿನಿಂದಲೂ ನಿರಾಕರಿಸುತ್ತಿದೆ. ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಮುಸಲ್ಮಾನರು, ಟರ್ಕಿಕ್ ಜನರೇ ಹೆಚ್ಚಾಗಿ ಇದ್ದಾರೆ. ಮೂಲಗಳ ಪ್ರಕಾರ, 10 ಲಕ್ಷಕ್ಕೂ ಹೆಚ್ಚು ಜನರನ್ನು ಇಂಥ ಶಿಬಿರಗಳಲ್ಲಿ ಹಿಡಿದಿಡಲಾಗಿದೆ.
‘ಈ ಹೇಳಿಕೆಯು ಸುಳ್ಳುಗಳಿಂದ ಕೂಡಿದೆ. ಚೀನಾಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿದೆ‘ ಎಂದು ವಿಶ್ವಸಂಸ್ಥೆಯ ಚೀನಾದ ರಾಯಭಾರಿ ಝಾಂಗ್ ಜುನ್ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.