ಇಸ್ಲಾಮಾಬಾದ್: ಶ್ರೀಲಂಕಾದ ಜೈಲಿನಲ್ಲಿರುವ 43 ಮಂದಿ ಪಾಕಿಸ್ತಾನದ ಕೈದಿಗಳನ್ನು ಬಿಡುಗಡೆ ಮಾಡಲು ದ್ವೀಪ ರಾಷ್ಟ್ರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಈ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಹಾಗೂ ಶ್ರೀಲಂಕಾದ ಹೈಕಮಿಷನರ್ ಅಡ್ಮಿರಲ್ ರವೀಂದ್ರ ಚಂದ್ರ ಶ್ರೀವಿಜಯ್ ಗುಣರತ್ನ ಅವರು ಉಭಯ ದೇಶಗಳ ಕೈದಿಗಳನ್ನು ಸ್ವದೇಶಕ್ಕೆ ಕಳುಹಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಡಾನ್ ಪತ್ರಿಕೆ ವರದಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ಮತ್ತು ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಯ ಕುರಿತು ಸಭೆಯಲ್ಲಿ ಚರ್ಚಿಸಿದರು. ಅಲ್ಲದೇ ಭದ್ರತೆ ಮತ್ತು ಮಾದಕ ದ್ರವ್ಯ ನಿಗ್ರಹ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಅವರು ಮಾತುಕತೆ ನಡೆಸಿದ್ದಾರೆ.
43 ಪಾಕಿಸ್ತಾನದ ಕೈದಿಗಳನ್ನು ದೇಶಕ್ಕೆ ಮರಳಿ ಕರೆತರಲು ಪಾಕಿಸ್ತಾನದ ಆಂತರಿಕ ಸಚಿವಾಲಯ ಕಳೆದ ಒಂದು ತಿಂಗಳಿನಿಂದ ಶ್ರೀಲಂಕಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ.
ಈ ಕುರಿತು ಮಾತನಾಡಿದ ನಖ್ವಿ, ಕೆಲವೇ ದಿನಗಳಲ್ಲಿ ಪಾಕಿಸ್ತಾನಿ ಕೈದಿಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು. ಸಹಕಾರಕ್ಕಾಗಿ ಶ್ರೀಲಂಕಾದ ಹೈಕಮಿಷನರ್‌ಗೆ ಧನ್ಯವಾದ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.