ADVERTISEMENT

ಗೂಗಲ್‍ನಲ್ಲಿ #MeToo: 2 ವರ್ಷಗಳಲ್ಲಿ 48 ಉದ್ಯೋಗಿಗಳು ವಜಾ 

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 7:03 IST
Last Updated 26 ಅಕ್ಟೋಬರ್ 2018, 7:03 IST
ಸುಂದರ್ ಪಿಚೈ
ಸುಂದರ್ ಪಿಚೈ   

ಸ್ಯಾನ್ ಫ್ರಾನ್ಸಿಸ್ಕೊ: ಕಳೆದ 2 ವರ್ಷಗಳಲ್ಲಿ ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ 13 ಹಿರಿಯ ಅಧಿಕಾರಿಗಳು ಸೇರಿದಂತೆ 48 ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಗೂಗಲ್ ಸಂಸ್ಥೆ ಹೇಳಿದೆ.
ಈ ವಿಷಯದ ಬಗ್ಗೆ ಎಎಫ್‍ಪಿ ಮತ್ತು ಇತರ ಸುದ್ದಿ ಸಂಸ್ಥೆಗಳು ಗೂಗಲ್ ಸಂಸ್ಥೆಯ ಪ್ರತಿಕ್ರಿಯೆ ಕೇಳಿದಾಗ, ಗೂಗಲ್ ಸಂಸ್ಥೆ ತಮ್ಮ ಉದ್ಯೋಗಿಗಳಿಗೆ ಸಿಇಒಸುಂದರ್ ಪಿಚೈಮತ್ತು ಇಲೇನ್ ನೌಟನ್ ಕಳಿಸಿದ್ದ ಇಮೇಲ್‍ನ್ನು ಬಹಿರಂಗ ಪಡಿಸಿದೆ. ಗೂಗಲ್ ವಕ್ತಾರರು ಬ್ಲೂಮ್‍ಬರ್ಗ್ ಗೆ ಈ ಇಮೇಲ್ ಪ್ರತಿಯನ್ನು ಕಳಿಸಿದ್ದರು.

ಇಮೇಲ್‍ನಲ್ಲಿ ಏನಿದೆ?
ಉದ್ಯೋಗಿಗಳ ಸುರಕ್ಷೆಗೆ ಗೂಗಲ್ ಸಂಸ್ಥೆ ಆದ್ಯತೆ ನೀಡುತ್ತದೆ.ಕಳೆದ ಎರಡು ವರ್ಷಗಳಲ್ಲಿ 13 ಹಿರಿಯ ಮ್ಯಾನೇಜರ್‌ಗಳು ಸೇರಿದಂತೆ ಒಟ್ಟು 48 ಉದ್ಯೋಗಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು ಇವರನ್ನು ಕೆಲಸದದಿಂದ ವಜಾ ಮಾಡಿದೆ.ಇವರಲ್ಲಿಯಾರಿಗೂ ಎಕ್ಸಿಟ್ ಪ್ಯಾಕೇಜ್ ನೀಡಿಲ್ಲ ಎಂದು ಇಮೇಲ್‍ನಲ್ಲಿ ಹೇಳಲಾಗಿದೆ.

ಗೂಗಲ್‍ನಲ್ಲಿಯೂ #MeToo ?
ಅಂಡ್ರಾಯಿಡ್ ಇಂಕ್ ಸಂಸ್ಥಾಪಕ ಆಂಡಿ ರೂಬಿನ್ ಅವರು ಗೂಗಲ್ ಉದ್ಯೋಗಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಪ್ರಕಟಿಸಿತ್ತು.ಈ ವರದಿ ಪ್ರಕಾರ 2013ರಲ್ಲಿ ರೂಬಿನ್ ಅವರು ಗೂಗಲ್ ಉದ್ಯೋಗಿಯಲ್ಲಿ 'ಸೆಕ್ಸ್ 'ಗಾಗಿ ಒತ್ತಾಯಿಸಿದ್ದರು. ಮಹಿಳೆ ದೂರು ನೀಡಿದಾಗ ಗೂಗಲ್ ಈ ವಿಷಯದ ತನಿಖೆ ನಡೆಸಿ ರೂಬಿನ್ ತಪ್ಪಿತಸ್ಥ ಎಂದು ಹೇಳಿತ್ತು. ಆರೋಪ ಸಾಬೀತಾಗಿದ್ದರಿಂದ ಗೂಗಲ್ ಸಂಸ್ಥೆ ತೊರೆಯುವಂತೆ ಸಂಸ್ಥೆ ರೂಬಿನ್‍ಗೆ ಹೇಳಿತ್ತು. ಲೈಂಗಿಕ ದೌರ್ಜನ್ಯ ಆರೋಪ ವಿಷಯವನ್ನು ಮುಚ್ಚಿಟ್ಟ ಗೂಗಲ್, ರೂಬಿನ್‌ಗೆ 90 ಮಿಲಿಯನ್ ಎಕ್ಸಿಟ್ ಪ್ಯಾಕೇಜ್ ನೀಡಿ ಬೀಳ್ಕೊಟ್ಟಿತ್ತು ಎಂದು ಬಲ್ಲಮೂಲಗಳು ಹೇಳಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಹೇಳಿದೆ.

ADVERTISEMENT

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿನ ವರದಿ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತುಎಲೀನ್ ನೌಟನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರ ಬದಲಾಗಿ ತಮ್ಮ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದ್ದಾರೆ ಎಂದು ದಿವರ್ಜ್ ಸುದ್ದಿತಾಣ ವರದಿ ಮಾಡಿದೆ.

ರೂಬಿನ್ ಪ್ರತಿಕ್ರಿಯೆ ಏನು ?

ನ್ಯೂಯಾರ್ಕ್ ಟೈಮ್ಸ್ ವರದಿ ಬಗ್ಗೆ ಟ್ವೀಟ್ ಪ್ರತಿಕ್ರಿಯೆ ನೀಡಿದ ರೂಬಿನ್, ತಮ್ಮ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಹೇಳಲಾಗಿದೆ.ನಾನು ಯಾವುದೇ ಮಹಿಳೆಗೆಹೋಟೆಲ್ ಕೋಣೆಯಲ್ಲಿ ಸೆಕ್ಸ್ ಗೆ ಒತ್ತಾಯಿಸಿಲ್ಲ.ಈ ಆರೋಪ ನಿರಾಧಾರ . ನನ್ನ ವೈಯಕ್ತಿಕ ಬದುಕಿನ ಬಗ್ಗೆ ಅನಾಮಿಕರು ಹೇಳುತ್ತಿರುವುದು ಸತ್ಯ ಸಂಗತಿ ಅಲ್ಲ ಎಂದಿದ್ದಾರೆ.

ರೂಬಿನ್ ಮೇಲಿನ ಆರೋಪದ ಬಗ್ಗೆ ಬ್ಲೂಮ್ ಬರ್ಗ್ ಗೆ ಪ್ರತಿಕ್ರಿಯಿಸಿದ ರೂಬಿನ್ ಅವರ ಪ್ರತಿನಿಧಿ ಸ್ಯಾಮ್ ಸಿಂಗರ್, ರೂಬಿನ್ ಗೂಗಲ್ ಸಂಸ್ಥೆಯಲ್ಲಾಗಲೀ, ಬೇರೆಡೆಯಲ್ಲಾಗಲೀ ಯಾವುದೇ ರೀತಿಯಲ್ಲಿ ಕೆಟ್ಟದಾಗಿ ವರ್ತಿಸಿಲ್ಲ. 2012ರಲ್ಲಿ ಅವರೊಂದು ಸಂಬಂಧದಲ್ಲಿ ಇದ್ದಿದ್ದು, ಅದು ಸಮ್ಮತಿಯ ಸಂಬಂಧ ಆಗಿತ್ತು.ಈ ಹೊತ್ತಲ್ಲಿ ಸಂಸ್ಥೆಯ ಉದ್ಯೋಗಿಗಳೊಂದಿಗಿನ ಸಂಬಂಧಕ್ಕೆ ನಿರ್ಬಂಧ ವಿಧಿಸಿರುವ ಯಾವುದೇ ನೀತಿ ಇರಲಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.