ಢಾಕಾ: ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಸುಮಾರು 49 ಶಿಕ್ಷಕರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಸಂಘಟನೆಯೊಂದು ದೂರಿದೆ.
ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರೈಸ್ತ ಓಯಿಕ್ಯ ಪರಿಷತ್ತಿನ ವಿದ್ಯಾರ್ಥಿ ವಿಭಾಗವಾದ ಬಾಂಗ್ಲಾದೇಶ ಛತ್ರ ಓಯಿಕ್ಯ ಪರಿಷತ್ ಸಂಘಟನೆಯ ಸಂಯೋಜಕ ಸಾಜಿಬ್ ಸರ್ಕಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ ಎಂದು ‘ದಿ ಡೈಲಿ ಸ್ಟಾರ್’ ವರದಿ ಮಾಡಿದೆ.
ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ದೇಶ ತ್ಯಜಿಸಿದ ಬಳಿಕ ದೇಶದಾದ್ಯಂತ ನಡೆದ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತ ಶಿಕ್ಷಕರ ಮೇಲೆ ದೈಹಿಕ ಹಲ್ಲೆ ನಡೆದಿದೆ. ಅಲ್ಲದೆ ಬಲವಂತವಾಗಿ 49 ಶಿಕ್ಷಕರಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಅವರು ಆರೋಪಿಸಿದರು.
ನಂತರ ಕೆಲ ದಿನಗಳಲ್ಲಿ ಸುಮಾರು 19 ಮಂದಿಯನ್ನು ಪುನಃ ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.
ಹಿಂಸಾಚಾರದ ವೇಳೆ ಧಾರ್ಮಿಕ, ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ದಾಳಿ, ಲೂಟಿಗಳು ನಡೆದಿವೆ. ಮಹಿಳೆಯರ ಮೇಲೆ ಹಲ್ಲೆಗಳು ನಡೆದಿದ್ದು, ದೇಗುಲಗಳನ್ನು ಧ್ವಂಸಗೊಳಿಸಲಾಗಿದೆ. ಮನೆ ಮತ್ತು ಅಂಗಡಿ ಮುಂಗಟ್ಟುಗಳಿಗೆ ಬೆಂಕಿಯಿಟ್ಟು ನಾಶ ಮಾಡಲಾಗಿದೆ. ಕೆಲವರ ಕೊಲೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ರಾಜಕೀಯ ಪಕ್ಷಗಳ ಜತೆ ಯೂನಸ್ ಸಭೆ:
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಯೂನಸ್ ಮುಹಮ್ಮದ್ ಅವರು ಜಾತಿಯಾ ಪಾರ್ಟಿ, ಗೊನೊ ಫೋರಂ, ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶ, ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಸೇರಿದಂತೆ 35 ರಾಜಕೀಯ ಪಕ್ಷಗಳ ಜತೆ ಶನಿವಾರ ಸರಣಿ ಸಭೆಗಳನ್ನು ನಡೆಸಿದ್ದಾರೆ.
ಮಧ್ಯಂತರ ಸರ್ಕಾರ ತರಬಹುದಾದ ಸುಧಾರಣೆಗಳ ಕುರಿತು ಮತ್ತು ಅವುಗಳ ರೂಪುರೇಷೆಗಳ ಕುರಿತು ಯೂನಸ್ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ಚರ್ಚಿಸಿದರು ಎಂದು ಅವರ ವಿಶೇಷ ಸಹಾಯಕ ಮಹ್‌ಫುಜ್ ಆಲಂ ತಿಳಿಸಿದ್ದಾರೆ.
ಯೂನಸ್ ಅವರು ತಾವು ಕೈಗೋಳ್ಳಲಿರುವ ಸುಧಾರಣೆಗಳ ಕುರಿತ ಸಮಗ್ರ ಚೌಕಟ್ಟನ್ನು ಶೀಘ್ರದಲ್ಲಿಯೇ ತರಲಿದ್ದಾರೆ ಎಂದು ಅವರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.