ADVERTISEMENT

ಬಾಂಗ್ಲಾದೇಶ: ಅಲ್ಪಸಂಖ್ಯಾತ ಸಮುದಾಯದ 49 ಶಿಕ್ಷಕರಿಂದ ಒತ್ತಾಯಪೂರ್ವಕ ರಾಜೀನಾಮೆ

ಪಿಟಿಐ
Published 1 ಸೆಪ್ಟೆಂಬರ್ 2024, 9:34 IST
Last Updated 1 ಸೆಪ್ಟೆಂಬರ್ 2024, 9:34 IST
<div class="paragraphs"><p>ಬಾಂಗ್ಲಾದೇಶದ ಢಾಕಾದಲ್ಲಿ ಹಿಂದೂಗಳಿಂದ ಪ್ರತಿಭಟನೆ</p></div>

ಬಾಂಗ್ಲಾದೇಶದ ಢಾಕಾದಲ್ಲಿ ಹಿಂದೂಗಳಿಂದ ಪ್ರತಿಭಟನೆ

   

ರಾಯಿಟರ್ಸ್ ಚಿತ್ರ

ಢಾಕಾ: ಮಾಜಿ ಪ್ರಧಾನಿ ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಆಗಸ್ಟ್ 5ರಂದು ಪತನಗೊಂಡ ಬಳಿಕ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕನಿಷ್ಠ 49 ಶಿಕ್ಷಕರು ಒತ್ತಾಯಪೂರ್ವಕವಾಗಿ ರಾಜೀನಾಮೆ ನೀಡುವಂತಾಯಿತು ಎಂದು ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಸಂಘಟನೆಯೊಂದು ಹೇಳಿದೆ.

ADVERTISEMENT

ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಒಕ್ಯಾ ಪರಿಷತ್ತಿನ ವಿದ್ಯಾರ್ಥಿ ಘಟಕ 'ಬಾಂಗ್ಲಾದೇಶ ಛತ್ರ ಒಕ್ಯಾ ಪರಿಷತ್‌' ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಬಹಿರಂಗಪಡಿಸಿದೆ ಎಂದು ವರದಿಯಾಗಿದೆ.

ಮೀಸಲಾತಿ ವಿಚಾರವಾಗಿ ಆರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಪ್ರಧಾನಿ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ದೇಶದಾದ್ಯಂತ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಿಕ್ಷಕರು ದೈಹಿಕ ದೌರ್ಜನ್ಯ ಎದುರಿಸಬೇಕಾಯಿತು. ಸುಮಾರು 49 ಶಿಕ್ಷಕರು ಬಲವಂತವಾಗಿ ರಾಜೀನಾಮೆ ನೀಡುವಂತಾಯಿತು. ಈ ಪೈಕಿ 19 ಮಂದಿ ಪುನಃ ಕೆಲಸಕ್ಕೆ ನಿಯೋಜನೆಹೊಂಡಿದ್ದಾರೆ ಎಂದು ಸಂಘಟನೆಯ ಸಂಯೋಜಕ ಸಾಜಿಬ್‌ ಸರ್ಕಾರ್‌ ತಿಳಿಸಿದ್ದಾರೆ.

ಹಸೀನಾ ನೇತೃತ್ವದ 'ಅವಾಮಿ ಲೀಗ್' ‍ಪಕ್ಷದ ಸರ್ಕಾರ ಪತನವಾದ ನಂತರದ ದಿನಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆದಿವೆ. ಹಿಂದೂ, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯದವರನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಲಾಗಿದೆ. ಮಹಿಳೆಯರ ಮೇಲೆ ಹಲ್ಲೆ, ದೇವಾಲಯಗಳ ಧ್ವಂಸ, ಮನೆ ಮತ್ತು ವ್ಯಾಪಾರ ಕೇಂದ್ರಗಳ ಲೂಟಿ ಸೇರಿದಂತೆ ಹಲವು ರೀತಿಯ ಹಿಂಸಾಕೃತ್ಯ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಹುದ್ದೆ ತೊರೆದು ದೇಶದಿಂದ ಪಲಾಯನ ಮಾಡಿರುವ ಹಸೀನಾ, ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ನಂತರವೂ ಹಿಂಸಾಚಾರ ಭುಗಿಲೆದ್ದ ಕಾರಣ ದೇಶದಾದ್ಯಂತ ಮೃತಪಟ್ಟವರ ಸಂಖ್ಯೆ 600ರ ಗಡಿ ದಾಟಿದೆ.

‌ಸದ್ಯ ಮಧ್ಯಂತರ ಸರ್ಕಾರ ರಚನೆಯಾಗಿದ್ದು, ನೊಬೆಲ್‌ ಪುರಷ್ಕೃತ ಅರ್ಥಶಾಸ್ತ್ರಜ್ಞ ಮೊಹಮ್ಮದ್‌ ಯೂನಸ್‌ ಅವರು ಮುಖ್ಯ ಸಲಹೆಗಾರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.