ADVERTISEMENT

ಇಸ್ರೇಲಿನ ಪೆಗಾಸಸ್‌ಗೆ ಜಗತ್ತಿನ 50,000 ಸ್ಮಾರ್ಟ್‌ಫೋನ್‌ಗಳು ಲಿಂಕ್: ವರದಿ

ಏಜೆನ್ಸೀಸ್
Published 19 ಜುಲೈ 2021, 5:27 IST
Last Updated 19 ಜುಲೈ 2021, 5:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಸರ್ಕಾರಿ ಏಜೆನ್ಸಿಗಳಿಗೆ ಸ್ಪೈವೇರ್ ಸೋರಿಕೆಮಾಡಿದ ಆರೋಪ ಹೊತ್ತಿರುವ ಇಸ್ರೇಲ್ ಮೂಲದ ಕುತಂತ್ರಾಂಶ ಸಂಸ್ಥೆಯು ವಿಶ್ವದಾದ್ಯಂತ ಕಾರ್ಯಕರ್ತರು, ಪತ್ರಕರ್ತರು, ಉದ್ಯಮಿಗಳು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿದಂತೆ 50,000 ಸ್ಮಾರ್ಟ್‌ಫೋನ್ ನಂಬರ್‌ಗಳ ಮಾಹಿತಿಯನ್ನು ಹೊಂದಿದೆ ಎಂಬುದು ಬಹಿರಂಗವಾಗಿದೆ.

ಇಸ್ರೇಲಿನ ಎನ್‌ಎಸ್ಒ ಹಾಗೂ ಪೆಗಾಸಸ್ ಕುತಂತ್ರಾಂಶ 2016ರಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.

ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಬಳಸಿಕೊಂಡು ಭಾರತದಲ್ಲಿ 40 ಪತ್ರಕರ್ತರು ಹಾಗೂ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳು ಸೇರಿದಂತೆ 12 ಕಾರ್ಯಕರ್ತರು ಫೋನ್‌ಗಳನ್ನು ಹ್ಯಾಕ್ ಮಾಡಿ ಕಣ್ಗಾವಲು ಇಡಲಾಗಿದೆ ಎಂಬುದು ಕೂಡಾ ವರದಿಯಾಗಿದೆ.

ಇಸ್ರೇಲಿ ಮೂಲದ ಸಾಫ್ಟ್‌‍ವೇರ್ ಕಂಪನಿಯು ಜಾಗತಿಕವಾಗಿ ಕುತಂತ್ರಾಂಶದ ಮೂಲಕ ಖಾಸಗಿ ಮಾಹಿತಿಗಳನ್ನು ಹ್ಯಾಕ್ ಮಾಡಿ ದುರುಪಯೋಗಪಡಿಸಿಕೊಂಡಿದ್ದು, ಡಿಜಿಟಲ್ ಯುಗದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಹೆಚ್ಚು ಕಳವಳಕಾರಿಯೆನಿಸಿದೆ.

ಪೆಗಾಸಸ್ ಡೇಟಾ ಸೋರಿಕೆಯ ವ್ಯಾಪ್ತಿಯ ಕುರಿತು ಜಂಟಿ ತನಿಖೆ ನಡೆಸಿರುವ 'ದಿ ವಾಷಿಂಗ್ಟನ್ ಪೋಸ್ಟ್', 'ಗಾರ್ಡಿಯನ್', 'ಲೆ ಮಾಂಡೆ' ಸುದ್ದಿ ಸಂಸ್ಥೆಗಳ ವರದಿಯ ಪ್ರಕಾರ, 2016ರಿಂದ 50,000 ಸ್ಮಾರ್ಟ್‌ಫೋನ್ ನಂಬರ್‌‍ಗಳು ಲಿಂಕ್ ಆಗಿವೆ ಎಂಬ ಆಘಾತಕಾರಿ ವಿವರವನ್ನು ಬಹಿರಂಗಪಡಿಸಿದೆ.

'ದಿ ವೈರ್' ವರದಿ ಪ್ರಕಾರ ಭಾರತದಲ್ಲಿ 300 ಮೊಬೈಲ್‌ಗಳು ಹ್ಯಾಕ್‌ ಆಗಿವೆ. ಇದರಲ್ಲಿ ರಾಜಕಾರಣಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು, ಉದ್ಯಮಿಗಳು, ಅಧಿಕಾರಿಗಳು ಸೇರಿದ್ದಾರೆ.

2019ರಲ್ಲಿ ನಿರ್ದಿಷ್ಟ ಜನರ ಮೇಲಿನ ಕಣ್ಗಾವಲಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರ, ಇಂತಹ ಆರೋಪಗಳು ನಿರಾಧಾರ ಎಂದಿತ್ತು.

ಮೆಕ್ಸಿಕೊದಲ್ಲಿ ರಾಜಕಾರಣಿಗಳು, ಪತ್ರಕರ್ತರು ಸೇರಿದಂತೆ 15,000 ನಂಬರ್‌ಗಳ ಮಾಹಿತಿಯು ಸೋರಿಕೆಯಾಗಿದೆ.

ಗೌಪ್ಯತೆ ಗೂಢಚರ್ಯೆ ಸಂಬಂಧ ಕ್ಯಾಲಿಫೋರ್ನಿಯಾ ಫೆಡರಲ್ ನ್ಯಾಯಾಲಯಕ್ಕೆ ವ್ಯಾಟ್ಸ್‌ಆ್ಯಪ್ ದೂರನ್ನು ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.