ADVERTISEMENT

ವಾಯವ್ಯ ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 6 ಚೀನಿಯರ ಸಾವು

ಪಿಟಿಐ
Published 26 ಮಾರ್ಚ್ 2024, 11:04 IST
Last Updated 26 ಮಾರ್ಚ್ 2024, 11:04 IST
<div class="paragraphs"><p>&nbsp;ಘಟನಾ ಸ್ಥಳದಲ್ಲಿರುವ&nbsp;ಪೊಲೀಸರು&nbsp; </p></div>

 ಘಟನಾ ಸ್ಥಳದಲ್ಲಿರುವ ಪೊಲೀಸರು 

   

(ರಾಯಿಟರ್ಸ್ ಚಿತ್ರ)

ಇಸ್ಲಾಮಾಬಾದ್: ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ಖೈಬರ್-ಪಖ್ತುಂಖ್ವಾದಲ್ಲಿ ಮಂಗಳವಾರ ಸ್ಫೋಟಕ ತುಂಬಿದ ವಾಹನವೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 6 ಮಂದಿ ಚೀನೀ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮೃತ ಚೀನಿಯರು ದಾಸು ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು . ಪ್ರಾಂತ್ಯದ ಶಾಂಗ್ಲಾ ಜಿಲ್ಲೆಯ ಬಿಶಮ್ ಪ್ರದೇಶದಲ್ಲಿ ಇಸ್ಲಾಮಾಬಾದ್‌ನಿಂದ ಕೊಹಿಸ್ತಾನ್‌ಗೆ ತೆರಳುತ್ತಿದ್ದ ಬಸ್‌ಗೆ ವಿರುದ್ಧ ದಿಕ್ಕಿನಿಂದ ಬಂದ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಗುಂಪು ಹೊತ್ತುಕೊಂಡಿಲ್ಲ .

ಘಟನೆಯು ‘ಆತ್ಮಾಹುತಿ ದಾಳಿ' ಎಂದು ಬಿಶಮ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಹೇಳಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅಲ್ಲಿನ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

ಆತ್ಮಾಹುತಿ ದಾಳಿಯಲ್ಲಿ ಬಸ್‌ನಲ್ಲಿದ್ದ ಕನಿಷ್ಠ 6 ಚೀನಿಯರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ.

ಶಾಂಗ್ಲಾ ಕೊಹಿಸ್ತಾನ್‌ಗೆ ಸಮೀಪದಲ್ಲಿದೆ. ಇಲ್ಲಿ 2021ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 9 ಮಂದಿ ಚೀನಿಯರು ಸೇರಿದಂತೆ 13 ಜನರು ಸಾವಿಗೀಡಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.