ADVERTISEMENT

ದೋಣಿ ಮುಳುಗಿ 70 ರೊಹಿಂಗ್ಯಾಗಳು ನಾಪತ್ತೆ: ಸಾವು ಶಂಕೆ

ರಾಯಿಟರ್ಸ್
Published 22 ಮಾರ್ಚ್ 2024, 19:31 IST
Last Updated 22 ಮಾರ್ಚ್ 2024, 19:31 IST
   

ಜಕಾರ್ತಾ: ಇಂಡೋನೇಷ್ಯಾದ ಆಚೆ ಎಂಬ ಪ್ರಾಂತ್ಯದ ಕರಾವಳಿಯಲ್ಲಿ ರೊಹಿಂಗ್ಯಾ ಜನರು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಳುಗಿದ್ದು, ಆ ದೋಣಿಯಲ್ಲಿದ್ದ 70ಕ್ಕೂ ಹೆಚ್ಚು ರೊಹಿಂಗ್ಯಾ ಜನರು ನಾಪತ್ತೆಯಾಗಿದ್ದಾರೆ. ಇವರೆಲ್ಲ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ದೋಣಿಯಲ್ಲಿದ್ದ ಒಟ್ಟು 151 ಜನರ ಪೈಕಿ 75 ಜನರನ್ನು ರಕ್ಷಿಸಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಎಂದು ಯುಎನ್‌ಎಚ್‌ಸಿಆರ್‌ ನಿರಾಶ್ರಿತರ ಸಂಸ್ಥೆ ಶುಕ್ರವಾರ ತಿಳಿಸಿದೆ. 

ಅಂತರರಾಷ್ಟ್ರೀಯ ವಲಸೆ ಸಂಸ್ಥೆಯೊಂದಿಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಯುಎನ್‌ಎಚ್‌ಸಿಆರ್‌ ‘ಒಂದು ವೇಳೆ ನಾಪತ್ತೆಯಾಗಿರುವವರು ಸಾವನ್ನಪ್ಪಿದ್ದಾರೆ ಎಂಬುದು ದೃಢವಾದರೆ ಇದು ಈ ವರ್ಷದ ಅತಿ ದೊಡ್ಡ ಜೀವಹಾನಿ ದುರಂತವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದೆ. 

ಬುಧವಾರ ಮೀನುಗಾರರು 6 ಜನ ವಲಸಿಗರನ್ನು ರಕ್ಷಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸಮುದ್ರದಲ್ಲಿ ಅಲೆಗಳ ಹೆಚ್ಚಿನ ಉಬ್ಬರವಿಳಿತದಿಂದ ದೋಣಿ ಮಗುಚಿದ ಬಳಿಕ ಅದರಲ್ಲಿದ್ದ ಜನರೆಲ್ಲ ಮಗುಚಿದ ದೋಣಿಯ ಮೇಲ್ಭಾಗದಲ್ಲಿ ನಿಂತಿದ್ದರು ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ. 

ADVERTISEMENT

ಹಲವು ವರ್ಷಗಳಿಂದ ರೊಹಿಂಗ್ಯಾ ಜನರು ಬೌದ್ಧಮತ ಬಹುಸಂಖ್ಯಾತರಿರುವ ಮ್ಯಾನ್ಮಾರ್‌ ಅನ್ನು ತೊರೆಯುತ್ತಿದ್ದಾರೆ. ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾಗಳಿಗೆ ಪೌರತ್ವವನ್ನು ನಿರಾಕರಿಸಲಾಗುತ್ತಿದೆ. ಅಲ್ಲದೇ ರೊಹಿಂಗ್ಯಾ ಜನರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಹೀಗಾಗಿ ರೊಹಿಂಗ್ಯಾಗಳು ಅಲ್ಲಿಂದ ವಲಸೆ ಹೋಗುತ್ತಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಮ್ಯಾನ್ಮಾರ್‌ನಿಂದ ಇಂಡೋನೇಷ್ಯಾಗೆ 2,300ಕ್ಕೂ ಹೆಚ್ಚು ರೊಹಿಂಗ್ಯಾಗಳು ವಲಸೆ ಹೋಗಿದ್ದಾರೆ. ಇದು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲೇ ಗರಿಷ್ಠ ಸಂಖ್ಯೆಯಾಗಿದೆ ಎಂದು ಯುಎನ್‌ಎಚ್‌ಸಿಆರ್‌ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.