ಕೊಲಂಬೊ: ದೇಶದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಯಾವ ಪಕ್ಷದ ಅಭ್ಯರ್ಥಿಯೂ ತಮಗೆ ರಾಜಕೀಯ ಸ್ವಾಯತ್ತತೆ ನೀಡುವ ಕುರಿತು ಘೋಷಣೆ ಮಾಡದ ಕಾರಣ, ಸೆ. 21ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ತಮಿಳು ನ್ಯಾಷನಲ್ ಪೀಪಲ್ಸ್ ಫ್ರಂಟ್ (ಟಿಎನ್‌ಪಿಎಫ್) ಹೇಳಿದೆ.
ಚುನಾವಣೆಗಳನ್ನು ಬಹಿಷ್ಕರಿಸುವಂತೆ ಟಿಎನ್‌ಪಿಎಫ್ ಆಂದೋಲನವನ್ನೂ ಆರಂಭಿಸಿದೆ. ಟಿಎನ್‌ಪಿಎಫ್‌ನ ಈ ನಡೆಯಿಂದ ಮತಗಳು ವಿಭಜನೆಯಾಗುವ ಆತಂಕ ಎದುರಾಗಿದೆ.
ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಆಂದೋಲನ ಅಂಗವಾಗಿ ಕರಪತ್ರಗಳನ್ನು ಹಂಚುವ ಕಾರ್ಯಕ್ಕೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿ, ಟಿಎನ್‌ಪಿಎಫ್ ಪ್ರಧಾನ ಕಾರ್ಯದರ್ಶಿ ಸೆಲ್ವರಾಜ್ ಕಜೇಂದ್ರನ್ ಅವರು ತಿರುಕ್ಕೋವಿಲ್ ನಗರದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕರಪತ್ರಗಳನ್ನು ಹಂಚುವ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷವು ಚುನಾವಣಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗವನ್ನೂ ಅವರು ಒತ್ತಾಯಿಸಿದ್ದಾರೆ.
ಶ್ರೀಲಂಕಾದ ಉತ್ತರ ಮತ್ತು ಪೂರ್ವಭಾಗದಲ್ಲಿ 20 ಲಕ್ಷಕ್ಕೂ ಅಧಿಕ ತಮಿಳು ಭಾಷಿಕ ಮತದಾರರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.