ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದ ಹಿಂದೂ ದೇಗುಲದ ಗೋಡೆ ಮೇಲೆ ಭಾರತದ ವಿರುದ್ಧ ಹಾಗೂ ಖಾಲಿಸ್ತಾನ ಪರ ಹಾಗೂ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಬರೆಯಲಾಗಿದೆ ಎಂದು ‘ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಶಹೀದ್ ಭಿಂದ್ರನ್‌ವಾಲೆ’, ‘ಖಾಲಿಸ್ತಾನಿ’ ಎಂದೆಲ್ಲಾ ಕಪ್ಪು ಬಣ್ಣದಲ್ಲಿ ಬರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆಯೂ ಅವಹೇಳನಕಾರಿಯಾಗಿ ಗೀಚಲಾಗಿದೆ.
ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಲಾಗುವುದು ಎಂದು ನೆವಾರ್ಕ್ ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ‘ಎಕ್ಸ್‘ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕದ ‘ಹಿಂದೂ ಅಮೆರಿಕನ್ ಫೌಂಡೇಶನ್’, ‘ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿರುವ ಸ್ವಾಮಿ ನಾರಾಯಣ ಮಂದಿರ್ ವಾಸನ ದೇಗುಲದಲ್ಲಿ ಖಾಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿದೆ. ಈ ಬಗ್ಗೆ ಪೊಲೀಸರು ಹಾಗೂ ನಾಗರಿಕ ಹಕ್ಕು ಮತ್ತು ನ್ಯಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇದೊಂದು ದ್ವೇಷದ ಅಪರಾಧ‘ ಎಂದು ಬರೆದುಕೊಂಡಿದೆ.
‘ಹಿಂದೂಗಳನ್ನು ಹತ್ಯೆಗೈದ ಖಾಲಿಸ್ತಾನ್ ಭಯೋತ್ಪಾದಕ ಕಿಂಗ್‌ಪಿನ್ ಭಿಂದ್ರನ್‌ವಾಲೆ ಹೆಸರನ್ನು ಬರೆದಿರುವುದು ದೇವಸ್ಥಾನಕ್ಕೆ ಬರುವವರಿಗೆ ಆಘಾತವನ್ನುಂಟು ಮಾಡಲು ಮತ್ತು ಹಿಂಸೆಯ ಭಯವನ್ನು ಸೃಷ್ಟಿಸಲು ಯೋಜಿಸಲಾಗಿದೆ’ ಎಂದು ಹಿಂದೂ ಅಮೆರಿಕನ್ ಫೌಂಡೇಶನ್ ಬರೆದುಕೊಂಡಿದೆ.
ಈ ಹಿಂದೆ ಕೆನಡಾ ಹಾಗೂ ಆಸ್ಟ್ರೇಲಿಯದಲ್ಲೂ ಇಂತಹದೇ ಪ್ರಕರಣ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.