ಬೆಂಗಳೂರು: ಹಾಂಗ್ ಕಾಂಗ್‌ನಲ್ಲಿ ಕೊರಿಯನ್ ಮಹಿಳಾ ವಿಡಿಯೊ ಸ್ಟ್ರೀಮರ್ (ಯುಟ್ಯೂಬರ್) ಒಬ್ಬರಿಗೆ ಭಾರತೀಯ ಮೂಲದನು ಎನ್ನಲಾದ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ವರದಿಯಾಗಿದೆ.
ಯುವತಿಗೆ ಕಿರುಕುಳ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವ್ಯಕ್ತಿಯ ವಿರುದ್ಧ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕೊರಿಯಾ ಮೂಲದ ಯುವತಿ ಹಾಂಗ್ ಕಾಂಗ್‌ನ ಸಬ್‌ವೇ ಮೆಟ್ರೊ ನಿಲ್ದಾಣದ ಬಳಿ, ಆ ಸ್ಥಳದ ಬಗ್ಗೆ ವಿಡಿಯೊ ಮೂಲಕ ಮಾಹಿತಿ ನೀಡುತ್ತಿರುತ್ತಾರೆ. ಆ ವೇಳೆ ಅಲ್ಲಿಗೆ ಬಂದಿದ್ದ ವ್ಯಕ್ತಿ, ಯುವತಿಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗಿರುವುದು ಲೈವ್ ವಿಡಿಯೊದಲ್ಲಿ ಕಂಡು ಬಂದಿದೆ. ಯುವತಿ ಆತನಿಂದ ತಪ್ಪಿಸಿಕೊಂಡು ಮುಂದೆ ಹೋದರೂ ಆತ ಹಿಂಬಾಲಿಸಿ ವಿಕೃತಿ ಮೆರೆದಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ವೇಳೆ ಯುವತಿ ‘ಹೆಲ್ಪ್ ಮಿ... ಹೆಲ್ಪ್ ಮಿ’ ಎಂದು ಸಹಾಯಯಾಚಿಸಿದ್ದಾರೆ.
ದೌರ್ಜನ್ಯ ಎಸಗಿದವನನ್ನು ಅಮಿತ್ ಎಂದು ಗುರುತಿಸಲಾಗಿದ್ದು, ಹಾಂಗ್ ಕಾಂಗ್‌ನಲ್ಲಿರುವ ರಾಜಸ್ತಾನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು freepressjournal ವೆಬ್‌ಸೈಟ್ ವರದಿ ಮಾಡಿದೆ.
ಇತ್ತೀಚಿಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳು, ಯುಟ್ಯೂಬರ್‌ಗಳು ಪ್ರವಾಸಿ ತಾಣಗಳಿಗೆ, ಅಪರೂಪದ ಸ್ಥಳಗಳಿಗೆ ತೆರಳಿ ವಿಡಿಯೊ ಮಾಡಿ ಮಾಹಿತಿ ನೀಡುವುದು ಹೆಚ್ಚುತ್ತಿದೆ. ಇಂತವರ ಮೇಲೆ ಆಗಂತುಕರು ಕಿರುಕುಳ ನೀಡುವ ಪ್ರಕರಣಗಳು ಕೂಡ ಹೆಚ್ಚುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.