ADVERTISEMENT

ಪೂರ್ವ ಲಡಾಖ್‌: ಅನಿಶ್ಚಿತತೆಗೆ ತೆರೆ ಎಳೆಯಲು ಶೀಘ್ರ ನಿರ್ಣಯ– ಚೀನಾ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 16:15 IST
Last Updated 26 ಸೆಪ್ಟೆಂಬರ್ 2024, 16:15 IST
   

ಬೀಜಿಂಗ್‌: ‘ಪೂರ್ವ ಲಡಾಖ್‌ನಲ್ಲಿ ಮೂಡಿರುವ ಅನಿಶ್ಚಿತ ಪರಿಸ್ಥಿತಿ ತಿಳಿಗೊಳಿಸಲು ಹಾಗೂ ಅಲ್ಲಿ ನಿಯೋಜಿಸಿರುವ ಸೇನೆಯ ವಾಪಸಾತಿ ಕುರಿತಂತೆ ಉಭಯ ರಾಷ್ಟ್ರಗಳಿಗೆ ಸಮ್ಮತವಾಗುವ ನಿರ್ಣಯವನ್ನು ಆದಷ್ಟು ಶೀಘ್ರ ಕೈಗೊಳ್ಳಲಾಗುವುದು’ ಎಂದು ಚೀನಾದ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ. 

ಗಡಿ ವಿಷಯ ಕುರಿತ ಭಿನ್ನಾಭಿಪ್ರಾಯಗಳನ್ನು ತಗ್ಗಿಸಲು ಹಾಗೂ ಸೇನೆ ವಾಪಸಾತಿ ಕುರಿತಂತೆ ಸಹಮತಕ್ಕೆ ಬರಲು ಚೀನಾ ಮತ್ತು ಭಾರತವು ಬದ್ಧವಾಗಿವೆ ಎಂದೂ ಹೇಳಿದೆ.

‘ಉಭಯ ನಾಯಕರ ಮಾರ್ಗದರ್ಶನದಲ್ಲಿ ಚೀನಾ – ಭಾರತ, ರಾಜತಾಂತ್ರಿಕ ಮತ್ತು ಸೇನಾ ಹಂತದಲ್ಲಿ ಮಾತುಕತೆ ನಡೆಸಿವೆ. ಉಭಯ ದೇಶಗಳ ವಿದೇಶಾಂಗ ಸಚಿವರ ನಡುವೆ ಹಾಗೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜೊತೆಗೂ ಚರ್ಚೆ ನಡೆದಿದೆ’ ಎಂದು ವಕ್ತಾರ ಝಾಂಗ್‌ ಕ್ಸಿಯೊಗಾಂಗ್ ಹೇಳಿದರು.

ADVERTISEMENT

‘ಅನಿಶ್ಚಿತತೆ ನಿವಾರಿಸಲು ಉಭಯ ರಾಷ್ಟ್ರಗಳಿಗೂ ಒಪ್ಪಿಗೆಯಾಗುವಂತೆ, ಆದಷ್ಟು ಶೀಘ್ರವೇ ತೀರ್ಮಾನಕ್ಕೆ ಬರಲು ಪರಸ್ಪರ ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಪೂರ್ವ ಲಡಾಖ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇರುವ ಅನಿಶ್ಚಿತತೆ ಅಂತ್ಯಗೊಳಿಸಲು, ಗಡಿಯಲ್ಲಿ ನಿಯೋಜಿಸಿರುವ, ಬಾಕಿ ಉಳಿದಿರುವ ಸೇನೆಯ ವಾಪಸಾತಿ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ನಡುವೆ ನಡೆದ ಚರ್ಚೆ ಹಾಗೂ ಇತ್ತೀಚಿಗೆ ಬ್ರಿಕ್ಸ್‌ ಶೃಂಗಸಭೆಯ ವೇಳೆ ರಷ್ಯಾದಲ್ಲಿ ವಾಂಗ್ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ನಡುವೆ ಮಾತುಕತೆಯನ್ನು ಅವರು ಉಲ್ಲೇಖಿಸಿದರು. 

ಸೆಪ್ಟೆಂಬರ್ 3ರಂದು ಈ ವಿಷಯ ಕುರಿತು ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ ನಿಂಗ್ ಅವರು, ‘ಎರಡೂ ದೇಶಗಳ ಸೇನೆಯ ಮುಂಚೂಣಿ ತುಕಡಿಗಳು, ಗಡಿಭಾಗದಲ್ಲಿ ಗಾಲ್ವಾನ್ ಕಣಿವೆ ಸೇರಿ 4 ಕಡೆ ನಿಯೋಜಿಸಿರುವ ಸೇನೆಯ ವಾಪಸಾತಿಯ ಅಗತ್ಯವನ್ನು ಮನಗಂಡಿವೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.