ADVERTISEMENT

ಡೊನಾಲ್ಡ್ ಟ್ರಂಪ್ ಅವರನ್ನು ತಡೆಯಬಲ್ಲ ಏಕೈಕ ವ್ಯಕ್ತಿ ಕಮಲಾ ಹ್ಯಾರಿಸ್: ರಶ್ದಿ

ಪಿಟಿಐ
Published 29 ಜುಲೈ 2024, 5:08 IST
Last Updated 29 ಜುಲೈ 2024, 5:08 IST
   

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷಗಾದಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಿರುವ ಮುಂಬೈ ಸಂಜಾತ ಲೇಖಕ ಸಲ್ಮಾನ್ ರಶ್ದಿ, ದೇಶವನ್ನು ನಿರಂಕುಶಾಧಿಕಾರದತ್ತ ಕೊಂಡೊಯ್ಯುವ ಡೊನಾಲ್ಡ್ ಟ್ರಂಪ್ ಅವರನ್ನು ತಡೆಯುವ ಶಕ್ತಿ ಇರುವ ಏಕೈಕ ವ್ಯಕ್ತಿ ಕಮಲಾ ಹ್ಯಾರಿಸ್ ಎಂದು ಹೇಳಿದ್ದಾರೆ.

'ಕಮಲಾ ಹ್ಯಾರಿಸ್ ಪರ ದಕ್ಷಿಣ ಏಷ್ಯಾ ಜನರ ಬೆಂಬಲ: ಎಂಬ ವರ್ಚುವಲ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಭಾರತ–ಅಮೆರಿಕ ಮೂಲದ ಸಂಸದರು, ಲೇಖಕರು, ನೀತಿ ನಿಪುಣರು, ಉದ್ಯಮಿಗಳು ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.

‘ಇದೊಂದು ನಿರ್ಣಾಯಕ ಕ್ಷಣ. ಮುಂಬೈ ಮೂಲದವನಾದ ನನಗೆ ಭಾರತ ಮೂಲದ ಮಹಿಳೆ ಶ್ವೇತಭವನದ ಚುಕ್ಕಾಣಿ ಹಿಡಿಯಲು ಸ್ಪರ್ಧೆಗಿಳಿದಿರುವುದನ್ನು ನೋಡುವುದು ಅದ್ಭುತ. ನನ್ನ ಪತ್ನಿ ಸಹ ಆಫ್ರಿಕಾ–ಅಮೆರಿಕದ ಮಹಿಳೆ. ಹಾಗಾಗಿ, ಕಪ್ಪು ವರ್ಣೀಯ ಮತ್ತು ಭಾರತ ಮೂಲದ ಮಹಿಳೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ನಮಗೆ ಅತ್ಯಂತ ಖುಷಿ ಕೊಟ್ಟಿದೆ’ಎಂದಿದ್ದಾರೆ.

ADVERTISEMENT

ಜೋ ಬೈಡನ್ ಕಣದಿಂದ ಹಿಂದೆ ಸರಿದ ಬಳಿಕ 59 ವರ್ಷದ ಕಮಲಾ ಅವರು ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ಪಕ್ಷ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಮುಂದಿನ ತಿಂಗಳು ಘೋಷಿಸುವ ಸಾಧ್ಯತೆ ಇದೆ.

ಅಮೆರಿಕದಲ್ಲಿ ಸದ್ಯ ಒಂದು ವಿಶೇಷ ವಾತಾರಣವಿದೆ. ಕಳೆದೊಂದು ವಾರದಲ್ಲಿ ಅಮೆರಿಕ ರಾಜಕಾರಣದಲ್ಲಿ ಪರಿವರ್ತನೆಯಾಗಿದೆ ಎಂದು ರಶ್ದಿ ಹೇಳಿದ್ದಾರೆ.

ಅಧ್ಯಕ್ಷೀಯ ಚುನಾವಣೆಯ ಕಣಕ್ಕೆ ಕಮಲಾ ಹ್ಯಾರಿಸ್ ಬಂದ ಬಳಿಕ ಚರ್ಚೆಗಳೇ ಭಿನ್ನವಾಗಿ ನಡೆಯುತ್ತಿವೆ. ಖುಷಿ, ಆಶಾವಾದ, ಧನಾತ್ಮಕ ಮತ್ತು ಪ್ರಗತಿ ಪರ ಚಿಂತನೆಗಳು ಆರಂಭವಾಗಿವೆ ಎಂದೂ ಅವರು ಹೇಳಿದ್ದಾರೆ.

'ಒಂದೇ ಒಂದು ಒಳ್ಳೆ ಗುಣಗಳಿಲ್ಲದ ಟೊಳ್ಳು ವ್ಯಕ್ತಿತ್ವದ ವ್ಯಕ್ತಿ(ಟ್ರಂಪ್) ದೇಶವನ್ನು ನಿರಂಕುಶಾಧಿಕಾರದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಅದು ಸಾಧ್ಯವಿಲ್ಲ’ ಎಂದಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರನ್ನು ತಡೆಯಬಲ್ಲ ವ್ಯಕ್ತಿ ಕಮಲಾ ಹ್ಯಾರಿಸ್ ಮಾತ್ರ ಎಂದಿರುವ ರಶ್ದಿ, ಆ ಬಗ್ಗೆ ನನಗೆ ಶೇಕಡ 1,000 ದಷ್ಟು ವಿಶ್ವಾಸವಿದೆ ಎಂದಿದ್ದಾರೆ.

ಅಮೆರಿಕ ಚುನಾವಣೆಯಲ್ಲಿ ಗೆಲ್ಲಲು ಸೆಲೆಬ್ರಿಟಿ ಸ್ಟೇಟಸ್ ಅಗತ್ಯವಿದೆ ಎಂಬ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈಗ ಟ್ರಂಪ್ ಸ್ಟಾರ್ ರೀತಿ ಕಾಣುತ್ತಿಲ್ಲ. ವೃದ್ಧನ ಹಾಗೆ ಕಾಣುತ್ತಿದ್ದಾರೆ. ದಢೂತಿಯಾಗಿದ್ದಾರೆ. ಕಮಲಾ ಹ್ಯಾರಿಸ್ ಸೂಪರ್‌ ಸ್ಟಾರ್ ರೀತಿ ಕಾಣುತ್ತಿದ್ದಾರೆ. ಪ್ರಚಾರ ಕಣಕ್ಕೆ ಅವರ ಎಂಟ್ರಿಯಿಂದ ಬಂದಿರುವ ಮೆರುಗು ಮುಂದಿನ ಕೆಲ ಸಮಯದ ಬಳಿಕ ನಡೆಯುವ ಚುನಾವಣೆಯಲ್ಲಿ ನಿರ್ಣಾಯಕವಾಗಲಿದೆ ಎಂದಿದ್ದಾರೆ.

ಅಮೆರಿಕದಲ್ಲಿ ಒಬ್ಬ ಮಹಿಳೆ, ಕಪ್ಪು ವರ್ಣೀಯರು ಮತ್ತು ಭಾರತ ಮೂಲದವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವುದಿಲ್ಲ ಎಂಬ ಮಾತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಲವು ದಶಕಗಳಿಂದ ಈ ಮಾತಿದೆ. ಸದ್ಯ ಪರಿಸ್ಥಿತಿ ಬದಲಾಗಿದೆ ಎಂದಿದ್ದಾರೆ.

‘ಮಹಿಳಾ ನಾಯಕತ್ವವನ್ನು ಈಗ ವಿಭಿನ್ನ ರೂಪದಲ್ಲಿ ನೋಡಲಾಗುತ್ತಿದೆ. ಜನಾಂಗೀಯ ವಿಷಯಗಳನ್ನು ಈಗ ಧನಾತ್ಮಕವಾಗಿ ಚರ್ಚಿಸಲಾಗುತ್ತಿದೆ. ಕಮಲಾ ಹ್ಯಾರಿಸ್ ಗೆಲ್ಲದೆ ಇರಲು ಕಾರಣಗಳೇ ಕಾಣುತ್ತಿಲ್ಲ’ ಎಂದು ರಶ್ದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.