ನವದೆಹಲಿ: ಅಬುಧಾಬಿ ಯುವರಾಜ ಶೇಖ್ ಖಾಲೇದ್ ಬಿನ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರು ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಅಬುಧಾಬಿ ಯುವರಾಜನ ಎರಡು ದಿನಗಳ ಪ್ರವಾಸ ಭಾನುವಾರದಿಂದ ಆರಂಭವಾಗಲಿದ್ದು, ಯುಎಇ ಸರ್ಕಾರದ ಹಲವು ಸಚಿವರು ಹಾಗೂ ವಾಣಿಜ್ಯ ಪ್ರತಿನಿಧಿಗಳ ನಿಯೋಗ ಇರಲಿದೆ.
ಅಬುಧಾಬಿ ಯುವರಾಜ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮಧ್ಯೆ ಪ್ರಧಾನಿ ಮೋದಿ ಜೊತೆ ಮಹತ್ವದ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ. ದ್ವಿಪಕ್ಷೀಯ ವಿಷಯಗಳ ಜೊತೆಗೆ, ಉಭಯ ನಾಯಕರು ಇಸ್ರೇಲ್-ಹಮಾಸ್ ಸಂಘರ್ಷದ ಪರಿಸ್ಥಿತಿ ಬಗ್ಗೆಯೂ ಚರ್ಚಿಸುವ ನಿರೀಕ್ಷೆ ಇದೆ.
ಈ ಭೇಟಿಯು ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ಮತ್ತು ಭಾರತ ನಡುವಣ ಬಾಂಧವ್ಯ ಮತ್ತಷ್ಟು ಬಲಪಡಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.
ಶೇಖ್ ಖಾಲೇದ್ ಬಿನ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ. ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.