ADVERTISEMENT

ಉಟ್ಟ ಬಟ್ಟೆ, ಚಪ್ಪಲಿಯೊಂದಿಗೆ ದೇಶ ತೊರೆದೆ: ಅಫ್ಗನ್‌ ಅಧ್ಯಕ್ಷ ಘನಿ ವಿಡಿಯೊ ಸಂದೇಶ

ಪಿಟಿಐ
Published 19 ಆಗಸ್ಟ್ 2021, 3:12 IST
Last Updated 19 ಆಗಸ್ಟ್ 2021, 3:12 IST
ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ
ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ    

ದುಬೈ: ‘ನಾನು ಧರಿಸಿದ್ದ ಒಂದು ಸಾಂಪ್ರದಾಯಿಕ ಉಡುಪು, ಒಂದು ನಿಲುವಂಗಿ, ಒಂದು ಜೊತೆಗೆ ಚಪ್ಪಲಿಯೊಂದಿಗೆ ನಾನು ದೇಶ ತೊರೆಯಬೇಕಾಯಿತು,’ ಎಂದು ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ ಹೇಳಿದ್ದಾರೆ. ಬುಧವಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ಅಫ್ಗನ್‌ನಿಂದ ಕಾಲ್ಕಿತ್ತ ತಮ್ಮ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಅಫ್ಗಾನಿಸ್ತಾನದಿಂದ ಪಲಾಯನ ಮಾಡಿದ ನಂತರ ಅಧ್ಯಕ್ಷ ಅಶ್ರಫ್ ಘನಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಬುಧವಾರ ತಡರಾತ್ರಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ಘನಿ, ತಾವು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇರುವುದನ್ನು ದೃಢಪಡಿಸಿದರು.

ADVERTISEMENT

ಸಂಭಾವ್ಯ ರಕ್ತಪಾತವನ್ನು ತಡೆಯುವ ಏಕೈಕ ಉದ್ದೇಶದಿಂದ ತಾವು ದೇಶವನ್ನು ತೊರೆದಿದ್ದಾಗಿ ಘನಿ ವಿಡಿಯೊದಲ್ಲಿ ವಿವರಿಸಿದ್ದಾರೆ. ಅಲ್ಲದೆ, ದೇಶದಿಂದ ಹೊರನಡೆಯುವಾಗ ಅಪಾರ ಪ್ರಮಾಣದ ಹಣ ತೆಗೆದುಕೊಂಡು ಹೋಗಿರುವ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ.

‘ದೇಹದ ಮೇಲಿದ್ದ ಸಾಂಪ್ರದಾಯಿಕ ಉಡುಪು, ನಿಲುವಂಗಿ, ಒಂದು ಜೊತೆ ಚಪ್ಪಲಿ ಜತೆಗೆ ನಾನು ದೇಶವನ್ನು ತೊರೆಯಬೇಕಾಯಿತು. ಇತ್ತೀಚಿನ ದಿನಗಳಲ್ಲಿ ನಾನು ಹಣ ವರ್ಗಾಯಿಸಿರುವುದಾಗಿ ಆರೋಪಿಸಲಾಗಿದೆ. ಈ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ’ ಎಂದು ಅವರು ಹೇಳಿದ್ದಾರೆ.

ಘನಿ 169 ದಶಲಕ್ಷ ಅಮೆರಿಕನ್‌ ಡಾಲರ್‌ನಷ್ಟು (₹1,256 ಕೋಟಿ) ಹಣದೊಂದಿಗೆ ಪಲಾಯನ ಮಾಡಿರುವುದಾಗಿ ತಜಕಿಸ್ತಾನದಲ್ಲಿರುವ ಅಫ್ಗಾನಿಸ್ತಾನದ ರಾಯಭಾರಿ ಆರೋಪ ಮಾಡಿದ್ದರು.

ತಮ್ಮ ವಿಡಿಯೊ ಸಂದೇಶದಲ್ಲಿ ಘನಿ, ಅಫ್ಗನ್ ಭದ್ರತಾ ಪಡೆಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಶಾಂತಿ ಪ್ರಕ್ರಿಯೆಯ ವೈಫಲ್ಯ’ದಿಂದಾಗಿ ತಾಲಿಬಾನ್‌ ಅಧಿಕಾರವನ್ನು ಕಸಿದುಕೊಂಡಿತು ಎಂದು ಅವರು ಹೇಳಿದ್ದಾರೆ. ‌

ಭಾನುವಾರ ತಾಲಿಬಾನಿಗಳು ಕಾಬೂಲ್ ಸಮೀಪಿಸುತ್ತಿದ್ದಂತೆಯೇ ಘನಿ ಅಫ್ಗಾನಿಸ್ತಾನವನ್ನು ತೊರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.