ಕಾಬೂಲ್: ಪಶ್ಚಿಮ ಅಫ್ಗಾನಿಸ್ತಾನದಲ್ಲಿ ರಸ್ತೆಬದಿಯಲ್ಲಿ ದುಷ್ಕರ್ಮಿಗಳು ಇರಿಸಿದ್ದ ಬಾಂಬ್ ಸ್ಫೋಟಗೊಂಡು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 34 ಪ್ರಯಾಣಿಕರು ಮೃತಪಟ್ಟಿದ್ದಾರೆ. ಈ ಪೈಕಿ ಮಕ್ಕಳು ಹಾಗೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
‘ಈ ಬಸ್ ಹೆರಾತ್‌ನಿಂದ ಕಂದಹಾರ್‌ಗೆ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು.ಘಟನೆಯಲ್ಲಿ 17ಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಇವರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಫರಾ ಪ್ರಾಂತದ ಪೊಲೀಸ್ ಮುಖ್ಯಸ್ಥರ ವಕ್ತಾರ ಮೊಹಿಬುಲ್ಲ ಮೊಹೀಬ್ ಮಾಹಿತಿ ನೀಡಿದ್ದಾರೆ.
ದಾಳಿಯ ಹೊಣೆಯನ್ನು ಇಲ್ಲಿಯವರೆಗೂ ಯಾರೂ ಹೊತ್ತಿಲ್ಲವಾದರೂ, ಈ ಪ್ರದೇಶದಲ್ಲಿ ತಾಲಿಬಾನ್ ದಂಗೆಕೋರರು ಸರ್ಕಾರಿ ಅಧಿಕಾರಿಗಳು ಹಾಗೂ ಭದ್ರತಾ ಪಡೆಗಳನ್ನು ಗುರಿಯಾಗಿರಿಸಿಕೊಂಡು ಈ ರೀತಿ ರಸ್ತೆಬದಿಯಲ್ಲಿ ಬಾಂಬ್ ಸ್ಪೋಟಿಸುವ ಘಟನೆಗಳು ನಡೆದಿವೆ. 18 ವರ್ಷಗಳ ಯುದ್ಧಕ್ಕೆ ಅಂತ್ಯ ಹಾಡಲು ಅಮೆರಿಕ ಜತೆ ಶಾಂತಿ ಮಾತುಕತೆ ನಡೆಸುತ್ತಿರುವ ತಾಲಿಬಾನ್, ಆಗಾಗೆ ಇಂತಹ ದಾಳಿ ಮುಂದುವರಿಸಿದೆ.
717 ನಾಗರಿಕರು ಮೃತ: ತಾಲಿಬಾನ್ ವಿರುದ್ಧಅಫ್ಗಾನ್ ಭದ್ರತಾ ಪಡೆ ಮತ್ತು ಅಮರಿಕ ಸೇನಾಪಡೆ ಕಾರ್ಯಾಚರಣೆ ನಡೆಸಿದವೇಳೆ ಮೃತಪಟ್ಟ ನಾಗರಿಕರ ಸಂಖ್ಯೆಯ ವರದಿಯನ್ನುಮಂಗಳವಾರವಷ್ಟೇ ವಿಶ್ವಸಂಸ್ಥೆ ಬಿಡುಗಡೆಗೊಳಿಸಿತ್ತು.
ವರದಿ ಪ್ರಕಾರ ವರ್ಷದ ಮೊದಲಾರ್ಧದಲ್ಲಿಆಫ್ಗನ್ ಭದ್ರತಾ ಪಡೆ ಕಾರ್ಯಾಚರಣೆ ವೇಳೆ403 ನಾಗರಿಕರು ಮೃತಪಟ್ಟಿದ್ದರೆ, ಅಮೆರಿಕ ಸೇನಾ ಕಾರ್ಯಾಚರಣೆ ವೇಳೆ 314 ಜನ ಮೃತಪಟ್ಟಿದ್ದರು. ತಾಲಿಬಾನ್ ಸೇರಿದಂತೆ ಉಳಿದ ಉಗ್ರರ ದಾಳಿಗೆ 531 ಜನ ಮೃತಪಟ್ಟಿದ್ದಾರೆ. ಈ ಪೈಕಿ 300 ಜನರನ್ನು ಗುರಿಯಾಗಿರಿಸಿಕೊಂಡೇ ದಾಳಿ ನಡೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.