ADVERTISEMENT

ಅಫ್ಗಾನಿಸ್ತಾನ: ರಕ್ಷಣಾ ಸಚಿವರನ್ನು ಗುರಿಯಾಗಿಸಿಕೊಂಡು ಬಾಂಬ್‌ ದಾಳಿ, 8 ಸಾವು

ಏಜೆನ್ಸೀಸ್
Published 4 ಆಗಸ್ಟ್ 2021, 9:34 IST
Last Updated 4 ಆಗಸ್ಟ್ 2021, 9:34 IST
ಅಫ್ಗಾನಿಸ್ತಾನದ ಕಾಬೂಲ್‌ ಬಳಿ ಬಾಂಬ್‌ ಸ್ಫೋಟ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಭದ್ರತಾ ಸಿಬ್ಬಂದಿ             –ಎಪಿ ಚಿತ್ರ
ಅಫ್ಗಾನಿಸ್ತಾನದ ಕಾಬೂಲ್‌ ಬಳಿ ಬಾಂಬ್‌ ಸ್ಫೋಟ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಭದ್ರತಾ ಸಿಬ್ಬಂದಿ             –ಎಪಿ ಚಿತ್ರ   

ಕಾಬೂಲ್‌: ‘ಅಫ್ಗಾನಿಸ್ತಾನದ ಹಂಗಾಮಿ ರಕ್ಷಣಾ ಸಚಿವರನ್ನು ಗುರಿಯಾಗಿಸಿಕೊಂಡು ನಡೆದ ಬಾಂಬ್‌ ದಾಳಿಯಲ್ಲಿ ಸುಮಾರು 8 ಮಂದಿ ಮೃತಪಟ್ಟಿದ್ದು, 20 ಮಂದಿಗೆ ಗಾಯಗಳಾಗಿವೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಕಾಬೂಲ್‌ ನಗರದ ಹೊರವಲಯದಲ್ಲಿನ ರಕ್ಷಣಾ ಸಚಿವ ಬಿಸ್ಮಿಲ್ಲಾ ಖಾನ್‌ ಮೊಹಮ್ಮದಿ ಅವರ ಅತಿಥಿ ಗೃಹದ ಬಳಿ ಮಂಗಳವಾರ ತಡರಾತ್ರಿ ಬಾಂಬ್‌ ದಾಳಿ ನಡೆದಿದೆ. ಈ ಬಳಿಕ ಉಗ್ರರು ಮತ್ತು ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಎಲ್ಲಾ ನಾಲ್ಕು ಉಗ್ರರನ್ನು ಹೊಡೆದುರುಳಿಸಲಾಗಿದೆ’ ಎಂದು ಅವರು ಹೇಳಿದರು.

‘ಈ ಬಾಂಬ್‌ ಸ್ಪೋಟದಲ್ಲಿ ಸಾವಿಗೀಡಾದವರ ಸಂಖ್ಯೆ ಇನ್ನಷ್ಟು ಏರಿಕೆಯಾಗಬಹುದು’ ಎಂದು ಆಫ್ಗನ್‌ ಆಂತರಿಕ ಸಚಿವಾಲಯದ ವಕ್ತಾರ ಮಿರ್ವೈಸಿ ಸ್ಟಾನೆಕ್ಜೈ ಅವರು ಬುಧವಾರ ತಿಳಿಸಿದರು.

ADVERTISEMENT

‘ಈ ದಾಳಿಯಲ್ಲಿ ರಕ್ಷಣಾ ಸಚಿವರಿಗೆ ಯಾವುದೇ ಗಾಯಗಳಾಗಿಲ್ಲ. ಬಾಂಬ್‌ ಸ್ಫೋಟ ಸಂಭವಿಸಿದ ಸಮಯದಲ್ಲಿ ಅವರು ಅತಿಥಿ ಗೃಹದಲ್ಲಿ ಇರಲಿಲ್ಲ. ಬಿಸ್ಮಿಲ್ಲಾ ಅವರ ಕುಟುಂಬದ ಸದಸ್ಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಈ ದಾಳಿಯ ಸಂಪೂರ್ಣ ಹೊಣೆಯನ್ನು ತಾಲಿಬಾನ್‌ ಹೊತ್ತಿಕೊಂಡಿದ್ದು, ದಕ್ಷಿಣ ಮತ್ತು ಪಶ್ಚಿಮ ಪ್ರಾಂತ್ಯಗಳ ರಾಜಧಾನಿ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಈ ದಾಳಿ ನಡೆಸಲಾಗಿದೆ. ಅಲ್ಲದೆ ವಿವಿಧ ಪ್ರಾಂತ್ಯಗಳ ಮೇಲೆ ಆಫ್ಗನ್‌ ಸೇನೆ ನಡೆಸಿದ ದಾಳಿಯ ಪ್ರತಿಕಾರವಾಗಿ ಈ ಬಾಂಬ್‌ ದಾಳಿಯನ್ನು ನಡೆಸಲಾಗಿದೆ. ಆಫ್ಗನ್ ಸೇನೆ ನಡೆಸಿದ ದಾಳಿಯಲ್ಲಿ ಹಲವು ನಾಗರಿಕರೂ ಮೃತಪಟ್ಟಿದ್ದರು’ ಎಂದು ತಾಲಿಬಾನ್‌ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.