ADVERTISEMENT

ಆಫ್ಗನ್ ಬಿಕ್ಕಟ್ಟು: 129 ಜನ ಒಳಗೊಂಡ ಏರ್ ಇಂಡಿಯಾ ವಿಮಾನ ಕಾಬೂಲ್‌ನಿಂದ ದೆಹಲಿಗೆ

ಡೆಕ್ಕನ್ ಹೆರಾಲ್ಡ್
Published 15 ಆಗಸ್ಟ್ 2021, 14:06 IST
Last Updated 15 ಆಗಸ್ಟ್ 2021, 14:06 IST
ಸಾಂದರ್ಭಿಕ ಚಿತ್ರ (ರಾಯಿಟರ್ಸ್)
ಸಾಂದರ್ಭಿಕ ಚಿತ್ರ (ರಾಯಿಟರ್ಸ್)   

ಕಾಬೂಲ್: ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಬಿಗಿ ಹಿಡಿತ ಸಾಧಿಸಿದ್ದು, ಕಾಬೂಲ್‌ ನಗರದ ಹೊರವಲಯವನ್ನು ಪ್ರವೇಶಿಸಿದ್ದಾರೆ. ಇದರ ಬೆನ್ನಲ್ಲೇ 129 ಪ್ರಯಾಣಿಕರನ್ನೊಳಗೊಂಡ ಏರ್ ಇಂಡಿಯಾ ವಿಮಾನವು ಕಾಬೂಲ್‌ನಿಂದ ದೆಹಲಿಗೆ ಪ್ರಯಾಣ ಬೆಳೆಸಿದೆ.

ಈ ಮಧ್ಯೆ, ಹಿರಿಯ ಅಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಸೇರಿದಂತೆ ಅಫ್ಗಾನಿಸ್ತಾನದ ಸರ್ಕಾರಿ ನಿಯೋಗವು ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿಯಾಗಲು ಕತಾರ್‌ಗೆ ತೆರಳಿದೆ ಎಂದು ಆಫ್ಗನ್ ಸಂಧಾನಕಾರರು ತಿಳಿಸಿದ್ದಾರೆ.

ಮುಂದಿನ ಕೆಲವು ದಿನಗಳಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರವನ್ನು ಬಯಸುತ್ತಿದ್ದೇವೆ ಎಂದು ತಾಲಿಬಾನ್ ವಕ್ತಾರರು ಹೇಳಿರುವುದಾಗಿ ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಹಿಳೆಯರಿಗೂ ಶಿಕ್ಷಣ, ಉದ್ಯೋಗದಲ್ಲಿ ಆದ್ಯತೆ ನೀಡಲಿದ್ದೇವೆ. ಆದರೆ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು. ಮರಣದಂಡನೆ, ಕಲ್ಲುತೂರಾಟ, ಅಂಗಚ್ಛೇದನದಂತಹ ಶಿಕ್ಷೆಗಳನ್ನು ನೀಡುವ ಬಗ್ಗೆ ನ್ಯಾಯಾಲಯಗಳು ನಿರ್ಧರಿಸಲಿವೆ ಎಂದೂ ವಕ್ತಾರರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.