ADVERTISEMENT

ಬಿಚ್ಚಿದ ತಲೆ, ಹೊರಬಂದ ಮಿದುಳು: ಕಾಬೂಲ್‌ನಲ್ಲಿ ಹಾರಿದ ವಿಮಾನದಿಂದ ಜಾರಿದವರ ವಿವರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಆಗಸ್ಟ್ 2021, 11:28 IST
Last Updated 19 ಆಗಸ್ಟ್ 2021, 11:28 IST
ಕಾಬೂಲ್‌ ವಿಮಾನ ನಿಲ್ದಾಣದ ದೃಶ್ಯ
ಕಾಬೂಲ್‌ ವಿಮಾನ ನಿಲ್ದಾಣದ ದೃಶ್ಯ   

ಕಾಬೂಲ್‌: ತಾಲಿಬಾನಿಗಳು ಕಾಬೂಲ್‌ ನಗರವನ್ನು ಪ್ರವೇಶಿಸುತ್ತಿದ್ದಂತೆ, ದೇಶ ತೊರೆಯಲು ಸಾವಿರಾರು ಮಂದಿ ವಿಮಾನ ನಿಲ್ದಾಣಕ್ಕೆ ಸೋಮವಾರ ಧಾವಿಸಿದ್ದರು. ಕಾಬೂಲ್‌ ವಿಮಾನ ನಿಲ್ದಾಣ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ವಿಮಾನ ನಿಲ್ದಾಣದ ಕೆಲ ಆಘಾತಕಾರಿ ದೃಶ್ಯಗಳು ಜಗತ್ತಿನಾದ್ಯಂತ ವೈರಲ್‌ ಆಗಿದ್ದವು. ಎತ್ತರದಲ್ಲಿ ಹಾರುತ್ತಿದ್ದ ವಿಮಾನದಿಂದ ಇಬ್ಬರು ವ್ಯಕ್ತಿಗಳು ಕೆಳಗೆ ಬೀಳುವ ದೃಶ್ಯವಂತೂ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು.

ಹಕ್ಕಿಗಳಂತೆ ಹಾರಿ ಕೆಳಗೆ ಬಿದ್ದ ವ್ಯಕ್ತಿಗಳ ಮೃತ ದೇಹಗಳು ವಲಿ ಸಲೆಕ್‌ ಎಂಬುವವರ ನಿವಾಸದ ಛಾವಣಿಯ ಮೇಲೆ ಬಿದ್ದಿದ್ದವು. ಆ ಘಟನೆಯ ಹೃದಯವಿದ್ರಾವಕ ವಿವರಗಳನ್ನು ಸ್ವತಃ ವಲಿ ಸಲೆಕ್‌ ಅವರೇ ಸುದ್ದಿತಾಣ 'ಸ್ಕ್ರಾಲ್‌.ಇನ್‌'ಗೆ ನೀಡಿದ್ದಾರೆ.

ಕಾಬೂಲ್‌ನ ಖೈರ್‌ ಖಾನಾ ಪ್ರದೇಶದ ಎರಡು ಅಂತಸ್ತಿನ ಮನೆಯಲ್ಲಿ ಸೋಮವಾರ ಮಧ್ಯಾಹ್ನ ವಲಿ ಸಲೆಕ್‌ ವಿಶ್ರಾಂತಿ ಪಡೆಯುತ್ತಿದ್ದರು. ಆ ಸಮಯದಲ್ಲಿ ಮನೆಯ ಹೆಣ್ಣುಮಕ್ಕಳು ಅಡುಗೆ ಮಾಡುತ್ತಿದ್ದರು. ಇಬ್ಬರು ಗಂಡು ಮಕ್ಕಳು ನಿದ್ರಿಸುತ್ತಿದ್ದರು. ಇದ್ದಕ್ಕಿದ್ದಂತೆ, ಮೇಲಿನಿಂದ ಜೋರಾದ ಸದ್ದನ್ನು ಕೇಳಿದ ಸಲೆಕ್‌ ಕುಟುಂಬದ ಸದಸ್ಯರಿಗೆ ಗಾಬರಿಯಾಯಿತು. ಆ ಸದ್ದು ಬಾಂಬ್‌ ಸ್ಫೋಟದಂತೆ ಭಾಸವಾಯಿತು ಎಂದು ಸಲೆಕ್‌ ತಿಳಿಸಿದ್ದಾರೆ.

ADVERTISEMENT

'ಸದ್ದನ್ನು ಕೇಳಿದ ನೆರೆಹೊರೆಯವರು ತಮ್ಮ ಮನೆಗಳಿಂದ ಹೊರಗೆ ಬಂದರು. ಏನು ಘಟಿಸಿರಬಹುದು ಎಂದು ತಿಳಿಯಲು ನಾನು ಛಾವಣಿ ಏರಿದೆ' ಎಂದು ಸಲೆಕ್‌ ಹೇಳಿದ್ದಾರೆ.

ಛಾವಣಿಯ ಮೇಲಿನ ಭಯಾನಕ ದೃಶ್ಯ ಸಲೆಕ್‌ ಅವರನ್ನು ಬೆಚ್ಚಿಬೀಳುವಂತೆ ಮಾಡಿತ್ತು. 'ಸಂಪೂರ್ಣ ಹಾನಿಗೊಂಡಿದ್ದ ಎರಡು ದೇಹಗಳಿಂದ ವಿಪರೀತ ರಕ್ತ ಹರಿದು ಹೊರಬರುತ್ತಿತ್ತು. ಅವರ ಹೊಟ್ಟೆ ಮತ್ತು ತಲೆಗಳು ತೆರೆದುಕೊಂಡಿದ್ದವು. ಮಿದುಳು ಹೊರಬಂದಿತ್ತು' ಎಂದು ಸಲೆಕ್‌ ವಿವರಿಸಿದ್ದಾರೆ.

'ಅವರು ವಿಮಾನದಿಂದ ಎಸೆಯಲ್ಪಟ್ಟ ತಾಲಿಬಾನಿಗಳು ಎಂದು ನಾನು ಮೊದಲು ಭಾವಿಸಿದ್ದೆ. ಆದರೆ, ನೆರೆಹೊರೆಯವರು ಬಂದು ಮೃತದೇಹಗಳನ್ನು ಪರಿಶೀಲಿಸಿದ ನಂತರ ಅವರ ಹಿನ್ನೆಲೆ ತಿಳಿಯಿತು' ಎಂದು ಸಲೆಕ್ ಹೇಳಿದ್ದಾರೆ.

ತಮ್ಮ ಪತ್ನಿ ಜಕಿಯಾ ಮನೆಯ ಛಾವಣಿಗೆ ಬಂದು ದೃಶ್ಯವನ್ನು ನೋಡಿದ ನಂತರ ಮೂರ್ಛೆ ಹೋದರೆಂದು ಸಲೆಕ್‌ ತಿಳಿಸಿದ್ದಾರೆ.

ಇಬ್ಬರ ಶವಗಳನ್ನು 300 ಮೀಟರ್ ದೂರದಲ್ಲಿರುವ ಮಸೀದಿಗೆ ಕೊಂಡೊಯ್ಯಲಾಯಿತು. ಇಬ್ಬರ ಗುರುತಿನ ಚೀಟಿಯನ್ನು ಅವರ ಬಟ್ಟೆಗಳ ಜೇಬಿನಿಂದ ಮಸೀದಿಯ ಮೌಲಾನಾ ಪತ್ತೆ ಮಾಡಿದರು. ನಂತರ ಅವರ ಕುಟುಂಬಗಳನ್ನು ಸಂಪರ್ಕಿಸಲಾಯಿತು ಎಂದು ಸಲೆಕ್‌ ಅವರ ನೆರೆಮನೆಯ ಯುವಕ ವಾಜಿದ್ ಹೇಳಿದ್ದಾರೆ.

ಮೃತಪಟ್ಟವರನ್ನು ಫಿದಾ ಮೊಹಮ್ಮದ್ ಮತ್ತು ಶಫೀವುಲ್ಲಾ ಎಂದು ಗುರುತಿಸಲಾಗಿದೆ. ಇಬ್ಬರು 20 ರಿಂದ 25 ವರ್ಷದವರಾಗಿರಬಹುದು ಎಂದು ಸಲೆಕ್ ತಿಳಿಸಿದ್ದಾರೆ.

47 ವರ್ಷದ ಸಲೆಕ್‌ ಅವರು ತಮ್ಮ ಮನೆಯಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ನಗರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಾರೆ ಎಂದು ಸ್ಕ್ರಾಲ್‌.ಇನ್‌ ವರದಿ ಮಾಡಿದೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.