ADVERTISEMENT

ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ ತಾಲಿಬಾನ್‌ ಶೀಘ್ರದಲ್ಲೇ ಹೊರಕ್ಕೆ: ರಷ್ಯಾ

ರಾಯಿಟರ್ಸ್
Published 4 ಅಕ್ಟೋಬರ್ 2024, 14:44 IST
Last Updated 4 ಅಕ್ಟೋಬರ್ 2024, 14:44 IST
<div class="paragraphs"><p>ತಾಲಿಬಾನ್‌ ಹೋರಾಟಗಾರ</p></div>

ತಾಲಿಬಾನ್‌ ಹೋರಾಟಗಾರ

   

ರಾಯಿಟರ್ಸ್ ಚಿತ್ರ

ಮಾಸ್ಕೊ: ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ ತಾಲಿಬಾನ್‌ ಅನ್ನು ಕೈಬಿಡುವ ನಿರ್ಧಾರವನ್ನು 'ಉನ್ನತ ಮಟ್ಟದಲ್ಲಿ' ಕೈಗೊಂಡಿರುವುದಾಗಿ ರಷ್ಯಾ ವಿದೇಶಾಂಗ ಸಚಿವಾಲಯ ತಿಳಿಸಿದೆ ಎಂದು 'ಟಿಎಎಸ್‌ಎಸ್‌' ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ಈ ನಿರ್ಧಾರವು ವಾಸ್ತವವಾಗಿ ಕಾರ್ಯರೂಪಕ್ಕೆ ಬರಲು ಹಲವು ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪೂರೈಸಬೇಕಿದೆ ಎಂದು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಅಫ್ಗಾನಿಸ್ತಾನದ ವಿಶೇಷ ಪ್ರತಿನಿಧಿಯಾಗಿರುವ ಝಮೀರ್‌ ಕಬುಲೋವ್‌ ಹೇಳಿರುವುದಾಗಿ ಉಲ್ಲೇಖಿಸಿದೆ.

ತಾಲಿಬಾನ್‌ ಆಡಳಿತದ ಅಫ್ಗಾನಿಸ್ತಾನವನ್ನು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಮಿತ್ರರಾಷ್ಟ್ರವಾಗಿ ಪರಿಗಣಿಸಲಾಗುವುದು ಎಂದು ಪುಟಿನ್‌ ಅವರು ಜುಲೈನಲ್ಲಿ ಹೇಳಿದ್ದರು.

20 ವರ್ಷಗಳ ಕಾಲ ಬೀಡುಬಿಟ್ಟಿದ್ದ ಯುಎಸ್‌ ಸೇನಾ ಪಡೆಗಳು 2021ರ ಆಗಸ್ಟ್‌ನಲ್ಲಿ ಅಫ್ಗಾನಿಸ್ತಾನದಿಂದ ಹೊರನಡೆದಿದ್ದವು. ಅದಾದ ಬಳಿಕ ತಾಲಿಬಾನ್‌ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಆಗಿನಿಂದ ರಷ್ಯಾ ಅಫ್ಗಾನಿಸ್ತಾನದೊಂದಿಗೆ ನಿಧಾನವಾಗಿ ಬಾಂಧವ್ಯ ಬೆಳೆಸಿಕೊಳ್ಳುತ್ತಿದೆ.

ತಾಲಿಬಾನ್‌ ಆಡಳಿತ ಕಾನೂನಾತ್ಮಕವೆಂದು ಯಾವುದೇ ದೇಶವು ಅಧಿಕೃತವಾಗಿ ಪರಿಗಣಿಸಿಲ್ಲ. ಆದಾಗ್ಯೂ, ಚೀನಾ ಮತ್ತು ಯುಎಇ ಅಫ್ಗಾನಿಸ್ತಾನದ (ತಾಲಿಬಾನ್‌) ರಾಯಭಾರಿಗಳನ್ನು ಒಪ್ಪಿಕೊಂಡಿವೆ.

ರಷ್ಯಾ ತಾಲಿಬಾನ್‌ ಅನ್ನು 2003ರಲ್ಲಿ ಭಯೋತ್ಪಾದಕ ಸಂಘಟನೆಗಳ ಗುಂಪಿಗೆ ಸೇರಿಸಿದೆ. ಆ ಪಟ್ಟಿಯಿಂದ ತಾಲಿಬಾನ್‌ ಅನ್ನು ಹೊರಗಿಡುವುದು ಅಫ್ಗಾನಿಸ್ತಾನದೊಂದಿಗಿನ ಬಾಂಧವ್ಯವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಮಾಸ್ಕೊದಲ್ಲಿ ಮಾತನಾಡಿರುವ ಅಫ್ಗಾನಿಸ್ತಾನ ಪ್ರಧಾನಿ ಅಮಿರ್‌ ಖಾನ್‌ ಮುತ್ತಕಿ, ಮಾಜಿ ದಂಗೆಕೋರ ಗುಂಪುಗಳನ್ನು ನಿಷೇಧಿತ ಸಂಘಟನೆಗಳ ಗುಂಪಿನಿಂದ ಹೊರಗಿಡಲು ಕಜಕಸ್ತಾನ ಮತ್ತು ಕಿರ್ಗಿಸ್ತಾನ ಕೈಗೊಂಡ ಇತ್ತೀಚಿನ ನಿರ್ಧಾರ ಸ್ವಾಗತಾರ್ಹ ನಡೆಯಾಗಿವೆ. ಅದೇ ನಿಟ್ಟಿನಲ್ಲಿ ರಷ್ಯಾ ಒಕ್ಕೂಟದ ಉನ್ನತ ಅಧಿಕಾರಿಗಳ ಸಕಾರಾತ್ಮಕ ಹೇಳಿಕೆಗಳನ್ನು ಶ್ಲಾಘಿಸುತ್ತೇವೆ ಮತ್ತು ಶೀಘ್ರದಲ್ಲೇ ಪರಿಣಾಮಕಾರಿಯಾದ ಕ್ರಮಗಳನ್ನು ಎದುರುನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಶುಕ್ರವಾರ ಪ್ರತ್ಯೇಕ ಹೇಳಿಕೆ ನೀಡಿರುವ ರಷ್ಯಾ ವಿದೇಶಾಂಗ ಸಚಿವ ಸರ್ಗೇ ಲಾವ್ರೋವ್‌, ಅಫ್ಗಾನಿಸ್ತಾನ ಸರ್ಕಾರದೊಂದಿಗೆ ಪ್ರಾಯೋಗಿಕ ಮಾತುಕತೆ ನಡೆಸುವುದು ಅಗತ್ಯ ಎಂಬುದು ಮನವರಿಕೆಯಾಗಿದೆ ಎಂದಿದ್ದಾರೆ.

'ಕಾಬೂಲ್‌ ಉಪಸ್ಥಿತಿ ಇಲ್ಲದೆ ಅಫ್ಗಾನ್‌ ವಸಾಹತಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸುವುದು ಹಾಗೂ ಸಮಸ್ಯೆಗಳನ್ನು ಪರಿಹರಿಸುವುದು ಅಸಾಧ್ಯ' ಎಂದೂ ಪ್ರತಿಪಾದಿಸಿದ್ದಾರೆ.

ಮುತ್ತಕಿ ಹಾಗೂ ನೆರೆ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಲಾವ್ರೋವ್‌ ಅವರು, 'ಕಾಬೂಲ್‌ ಜೊತೆಗೆ ರಾಜಕೀಯ, ವಾಣಿಜ್ಯ ಮತ್ತು ಆರ್ಥಿಕ ವ್ಯವಹಾರಗಳನ್ನು ಮಾಸ್ಕೊ ಮುಂದುವರಿಸಲಿದೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.