ಟೊರೊಂಟೊ: ಕೆನಡಾದ ಬ್ರಾಂಪ್ಟನ್ ಪ್ರಾಂತ್ಯದಲ್ಲಿ ಹಿಂದೂ ದೇವಾಲಯವೊಂದನ್ನು ವಿರೂಪಗೊಳಿಸಲಾಗಿದ್ದು, 'ಭಾರತ ವಿರೋಧಿ' ಬರಹಗಳನ್ನು ಬರೆಯಲಾಗಿದೆ. ಹೀಗಾಗಿ ಭಾರತೀಯ ಸಮುದಾಯವು ಆಘಾತಕ್ಕೊಳಗಾಗಿದೆ.
ಬ್ರಾಂಪ್ಟನ್‌ನಲ್ಲಿರುವ ಗೌರಿ ಶಂಕರ ಮಂದಿರದ ಮೇಲಿನ ದಾಳಿಯನ್ನು ಖಂಡಿಸಿ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿ ಮಂಗಳವಾರ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.
‘ವಿಧ್ವಂಸಕ ಕೃತ್ಯವು ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. ಕೆನಡಾದ ಅಧಿಕಾರಿಗಳಿಗೆ ನಮ್ಮ ಆತಂಕವನ್ನು ತಿಳಿಸಿದ್ದೇವೆ’ ಎಂದು ಕಾನ್ಸುಲೇಟ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಕರಣದ ಸಂಬಂಧ ಸದ್ಯ ಕೆನಡಾದ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ದೇವಾಲಯ ವಿರೂಪಗೊಳಿಸಿರುವುದನ್ನು ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಅವರು ಖಂಡಿಸಿದ್ದಾರೆ.
‘ಈ ದ್ವೇಷಪೂರಿತ ವಿಧ್ವಂಸಕ ಕೃತ್ಯಕ್ಕೆ ನಮ್ಮ ನಗರಗಳಲ್ಲಾಗಲಿ ಅಥವಾ ದೇಶದಲ್ಲಾಗಲಿ ಸ್ಥಾನವಿಲ್ಲ‘ ಎಂದು ಬ್ರೌನ್ ಟ್ವೀಟ್ ಮಾಡಿದ್ದಾರೆ.
ಈ ದ್ವೇಷದ ಕೃತ್ಯದ ಬಗ್ಗೆ ಪೀಲ್ ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ನಿಶಾನ್ ದುರೈಯಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಅವರು ಹೇಳಿದರು.
‘ಪ್ರತಿಯೊಬ್ಬರೂ ತಮ್ಮ ಪೂಜಾ ಸ್ಥಳದಲ್ಲಿ ಸುರಕ್ಷಿತವಾಗಿರಲು ಅರ್ಹರು’ ಎಂದು ಬ್ರೌನ್ ಹೇಳಿದರು.
ಈ ತಿಂಗಳೊಂದರಲ್ಲೇ ಅಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಗುಂಪಿನ ದುಷ್ಕರ್ಮಿಗಳು ಮೂರು ದೇವಾಲಯಗಳ ಮೇಲೆ ದಾಳಿ ನಡೆಸಿದ್ದರು. ಅದರ ಮಧ್ಯೆಯೇ ಈಗ ಕೆನಡಾದಲ್ಲೂ ಅಂಥದ್ದೇ ಘಟನೆ ನಡೆದಿದೆ.
2022ರ ಜುಲೈನಲ್ಲಿ, ಕೆನಡಾದ ರಿಚ್ಮಂಡ್ ಹಿಲ್‌ನ ವಿಷ್ಣು ದೇವಾಲಯದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಹಾನಿ ಮಾಡಲಾಗಿತ್ತು.
ಸೆಪ್ಟೆಂಬರ್‌ನಲ್ಲಿ ಕೆನಡಾದ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ಖಲಿಸ್ತಾನಿ ದುಷ್ಕರ್ಮಿಗಳು ಭಾರತ ವಿರೋಧಿ ಬರಹಗಳ ಮೂಲಕ ವಿರೂಪಗೊಳಿಸಿದ್ದರು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.