ಕೈರೊ: ಗಾಜಾದಲ್ಲಿ ಕದನ ವಿರಾಮ ಘೋಷಿಸುವ ಸಂಬಂಧ ಹೊಸ ಪ್ರಸ್ತಾವವನ್ನು ಒಪ್ಪಿಕೊಳ್ಳುವಂತೆ ಹಮಾಸ್ ಮೇಲೆ ಅಮೆರಿಕ ಮತ್ತೆ ಒತ್ತಡ ಹೇರಿದೆ.
ಈ ಮಧ್ಯೆ ಸೋಮವಾರ ಮುಂಜಾನೆ ಗಾಜಾದ ದಕ್ಷಿಣದಲ್ಲಿರುವ ರಫಾಹ್ ನಗರದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು, ಹಸುಗೂಸು ಸೇರಿ 26 ಜನರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ದಾಖಲೆಗಳು ತಿಳಿಸಿವೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ಈ ವಾರ ಇಸ್ರೇಲ್‌ಗೆ ಭೇಟಿ ನೀಡಿದ್ದು, ನೂತನ ಪ್ರಸ್ತಾವವನ್ನು ಒಪ್ಪಿಕೊಳ್ಳುವಂತೆ ಹಮಾಸ್ ಬಂಡುಕೋರರನ್ನು ಒತ್ತಾಯಿಸಿದ್ದಾರೆ.
ಹೊಸ ಒಪ್ಪಂದದ ಕರಾರುಗಳನ್ನು ಸಾರ್ವಜನಿಕವಾಗಿ ಹೇಳಿಲ್ಲ. ಆದರೆ ಈಜಿಪ್ಟ್ ಅಧಿಕಾರಿಗಳು ಮತ್ತು ಇಸ್ರೇಲ್ ಮಾಧ್ಯಮಗಳ ಪ್ರಕಾರ, ‘ಇಸ್ರೇಲ್ ತನ್ನ ಬೇಡಿಕೆಗಳ ವಿಚಾರದಲ್ಲಿ ಮೃಧು ಧೋರಣೆ ತಾಳಿದೆ. ಕದನ ವಿರಾಮದ ಮೊದಲ ಆರು ವಾರಗಳಲ್ಲಿ ಇಸ್ರೇಲ್ ಕಾರಾಗೃಹಗಳಿಂದ ಬಿಡುಗಡೆ ಮಾಡುವ ನೂರಾರು ಪ್ಯಾಲೆಸ್ಟೀನಿಯನ್ನರ ಬದಲಿಗೆ ಹಮಾಸ್ ಬಿಡುಗಡೆ ಮಾಡಬೇಕಿರುವ ಒತ್ತೆಯಾಳುಗಳ ಸಂಖ್ಯೆಯನ್ನು ಅದು ಕಡಿಮೆ ಮಾಡಿದೆ’ ಎಂದು ಅವರು ಹೇಳಿದ್ದಾರೆ.
ಇತ್ತ ಹಮಾಸ್, ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಬಳಿಕ ಇಸ್ರೇಲ್ ದಾಳಿಯನ್ನು ನಿಲ್ಲಿಸಬೇಕು ಮತ್ತು ಸೈನಿಕರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದೆ. ಆದರೆ ದಾಳಿಗೆ ವಿರಾಮ ಘೋಷಿಸಲು ಮಾತ್ರ ಇಸ್ರೇಲ್ ಒಪ್ಪಿದೆ. ಹೀಗಾಗಿ ಅಮೆರಿಕ, ಈಜಿಪ್ಟ್ ಮತ್ತು ಕತಾರ್ ರಾಷ್ಟ್ರಗಳ ಮಧ್ಯಸ್ಥಿಕೆ ಮಾತುಕತೆಗೆ ನಿರಂತರವಾಗಿ ಅಡ್ಡಿಗಳು ಎದುರಾಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.