ಮಾಂಟ್ರಿಯಲ್: ನಿದ್ರೆಗೆ ಜಾರಿದ ಮಹಿಳಾ ಪ್ರಯಾಣಿಕರೊಬ್ಬರುಇಡೀ ರಾತ್ರಿ ವಿಮಾನದಲ್ಲಿಯೇ ಏಕಾಂಗಿಯಾಗಿ ಕಳೆದ ಆತಂಕದ ಕ್ಷಣಗಳನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಕೆನಡಾದ ಕ್ಯುಬೆಕ್‌ನಿಂದ ಟೊರೊಂಟೊಗೆ ತೆರಬೇಕಿದ್ದ ಟಿಪ್ಪಾನಿ ಆ್ಯಡಮ್ಸ್ ಅವರು ಏರ್ ಕೆನಡಾ ವಿಮಾನದಲ್ಲಿ ಕುಳಿತಿದ್ದರು. ವಿಮಾನ ಟೇಕ್ ಆಫ್ ಆದ ನಂತರ ನಿದ್ರೆಗೆ ಜಾರಿದ್ದರು. ಆ ವಿಮಾನ ಟೊರೊಂಟೊದ ಪಿಯರ್ಸನ್ ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ಇಳಿದ ನಂತರವೂ ಆಕೆ ಎಚ್ಚರಗೊಳ್ಳಲಿಲ್ಲ.ಎಲ್ಲ ಪ್ರಯಾಣಿಕರು ಇಳಿದಿದ್ದಾರೆ ಎಂದು ಭಾವಿಸಿದ ಸಿಬ್ಬಂದಿ ವಿಮಾನದ ಲೈಟ್ ಆಫ್ ಮಾಡಿ ತೆರಳಿದ್ದರು.
ಆದರೆ, ರಾತ್ರಿ ಎಚ್ಚರಗೊಂಡಾಗ ವಿಮಾನದಲ್ಲಿ ಕತ್ತಲು ಕವಿದಿರುವುದನ್ನು ನೋಡಿ ಆತಂಕಗೊಂಡಿದ್ದಲ್ಲದೇ, ಭಯದಿಂದ ಕಾಲ ಕಳೆದಿರುವುದನ್ನು ಮಹಿಳೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಆಕೆಯ ಸ್ನೇಹಿತರೊಬ್ಬರು ಅದನ್ನು ಏರ್‌ಕೆನಡಾ ಸಂಸ್ಥೆಯ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದ್ದು,ಇದಕ್ಕೆ ಓದುಗರು ವಿಮಾನಯಾನ ಸಂಸ್ಥೆ ಇದಕ್ಕೆ ಉತ್ತರಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
‘ನನಗೆ ಇದು ಕರಾಳ ದಿನ. ಆ ರಾತ್ರಿ ಏನು ನಡೆಯುತ್ತಿದೆ ಎಂಬುದೇ ತಿಳಿಯಲಿಲ್ಲ. ನಿದ್ರೆಯಿಂದ ಎಚ್ಚರಗೊಂಡ ನಂತರ ಆತಂಕದಿಂದಲೇ ನನ್ನ ಸ್ನೇಹಿತರಿಗೆ ಫೋನ್ ಮಾಡಲು ಯತ್ನಿಸಿದೆ. ದುರಾದೃಷ್ಟವಶಾತ್ ನನ್ನ ಮೊಬೈಲ್ ಸ್ವಿಚ್‌ಆಫ್ ಆಗಿತ್ತು’ಎಂದು ಆಡಮ್ಸ್ ಬರೆದುಕೊಂಡಿದ್ದಾರೆ.
‘ಎಲ್ಲಿಯಾದರೂ ಚಾರ್ಜಿಂಗ್ ಪಾಯಿಂಟ್ ಇದೆಯೇ ಎಂದು ನಾನು ಸಾಕಷ್ಟು ಹೊತ್ತು ತಡಕಾಡಿದೆ. ಕಾಕ್‌ಪಿಟ್‌ನಲ್ಲಿ ಬ್ಯಾಟರಿಯೊಂದು ಪತ್ತೆಯಾಯಿತು. ಅದರ ಸಹಾಯದಿಂದ ಬಾಗಿಲು ತೆರೆದೆ. ಆದರೆ, 50 ಅಡಿ ಎತ್ತರದಿಂದ ಹಾರಲು ಭಯವಾಯಿತು’ ಎಂದಿದ್ದಾರೆ.
‘ಬ್ಯಾಟರಿ ಸಹಾಯದಿಂದ ನಿಲ್ದಾಣದಲ್ಲಿ ಲಗೇಜ್ ಸಾಗಿಸುತ್ತಿದ್ದ ಚಾಲಕರ ಗಮನ ಸೆಳೆದೆ. ಬಾಗಿಲ ಬಳಿ ನೇತಾಡುತ್ತಿದ್ದ ನನ್ನ ಕಾಲುಗಳನ್ನು ಗುರುತಿಸಿ, ಅಚ್ಚರಿಗೊಂಡು ವಿಮಾನದಲ್ಲಿ ನೀವು ಹೇಗೆ ಉಳಿದುಕೊಂಡಿದ್ದೀರಿ ಎಂದು ಕೇಳಿದರು. ನನಗೂ ಅದು ಅಚ್ಚರಿಯಾಗಿದೆ’ ಎಂದು ಉತ್ತರಿಸಿದೆ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಏರ್ ಕೆನಡಾ ವಿಮಾನಯಾನ ಸಂಸ್ಥೆಕ್ಷಮೆ ಕೇಳಿದೆ ಎಂದು ಹೇಳಿರುವ ಅ್ಯಡಮ್ಸ್, ಆ ಕರಾಳ ದಿನ ನೆನಪಾದರೆ ನನಗೆ ಈಗಲೂ ಹೆಚ್ಚು ಹೊತ್ತು ನಿದ್ರೆ ಬರುವುದಿಲ್ಲ ಎಂದಿದ್ದಾರೆ.
ಈ ಕುರಿತು ಸಿಟಿವಿ ನ್ಯೂಸ್ ವರದಿ ಬಿತ್ತರ ಮಾಡಿತ್ತು. ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಏರ್ ಕೆನಡಾ ವಿಮಾನಯಾನ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.