ಕಾಬೂಲ್: ಜನರು ಅಫ್ಗಾನಿಸ್ತಾನದಿಂದ ಭಾರತಕ್ಕೆ ಪ್ರಯಾಣಿಸಲು ಅನುವಾಗುವ ನಿಟ್ಟಿನಲ್ಲಿ ಎರಡು ಏರ್ ಇಂಡಿಯಾ ವಿಮಾನಗಳನ್ನು ಅಣಿಗೊಳಿಸಲಾಗಿದೆ.
ತುರ್ತು ಸಂದರ್ಭದಲ್ಲಿ ಕಾಬೂಲ್ ನಿಂದ ನವದೆಹಲಿಗೆ ಪ್ರಯಾಣಿಸಲು ಎರಡು ವಿಮಾನಗಳು ಸಿದ್ಧವಾಗಿರುವಂತೆ ಭಾರತ ಸರ್ಕಾರವು ಏರ್ ಇಂಡಿಯಾಗೆ ಸೂಚಿಸಿದೆ. ಏರ್ ಇಂಡಿಯಾ ತನ್ನ ಸಿಬ್ಬಂದಿಗೆ ಸಜ್ಜಾಗಿರಲು ತಿಳಿಸಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ಟ್ವೀಟಿಸಿದೆ.
ಅಫ್ಗಾನಿಸ್ತಾನದಲ್ಲಿ ಪೂರ್ಣ ಅಧಿಕಾರ ಸ್ಥಾಪಿಸಲು ತಾಲಿಬಾನ್ ಒಂದು ಹೆಜ್ಜೆಯಷ್ಟೇ ಹಿಂದಿದೆ. ವಿದೇಶಿಯರು ಹಾಗೂ ಕೆಲವು ಆಫ್ಗನ್ನರೂ ಸಹ ಸುರಕ್ಷಿತ ಸ್ಥಳಗಳಿಗೆ ಹೊರಡಲು ಮುಂದಾಗಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ ಸೃಷ್ಟಿಯಾಗಿದೆ.
ಅಮೆರಿಕ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗುಂಪು ನಿಯಂತ್ರಿಸುವ ಪ್ರಯತ್ನ ಮಾಡಿವೆ.
ಅತ್ತ ಅಮೆರಿಕದಲ್ಲಿ ಅಫ್ಗಾನಿಸ್ತಾನದ ಪ್ರಜೆಗಳು ಶ್ವೇತ ಭವನದ ಎದುರು ಅಧ್ಯಕ್ಷ ಜೋ ಬೈಡನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿರುವ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿದೆ. 'ಬೈಡನ್ ನೀವು ನಮ್ಮನ್ನು ಅಪಾಯಕ್ಕೆ ದೂಡಿರುವಿರಿ, ಬೈಡನ್ ನೀವೇ ಹೊಣೆಗಾರರು' ಎಂದು ಆಫ್ಗನ್ನರು ಘೋಷಣೆಗಳನ್ನು ಕೂಗುತ್ತಿದ್ದಾರೆ.
ತಾಲಿಬಾನಿಗಳ ಅಟ್ಟಹಾಸ ಹೆಚ್ಚುತ್ತಿದ್ದಂತೆ ಆಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ. ಅಮೆರಿಕ ಸರ್ಕಾರವು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಯ ನಿಯೋಜನೆಯನ್ನು 6,000ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಆಫ್ಗಾನಿಸ್ತಾನದಿಂದ ಹೊರ ಹೋಗಲು ಪ್ರಸ್ತುತ ಕಾಬೂಲ್ ವಿಮಾನ ನಿಲ್ದಾಣ ಒಂದೇ ಮಾರ್ಗವಾಗಿದೆ.
ಇದನ್ನೂ ಓದಿ: ಆಳ-ಅಗಲ | ಅಫ್ಗಾನಿಸ್ತಾನ ಪತನ, ಭಯಭೀತ ಜನರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.