ಲಂಡನ್: ವಾಯುಮಾಲಿನ್ಯವು ಕಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ ನಾಶ ಮಾಡುವ ಗ್ಲಾಕೋಮಾ (ಕಾಚಬಿಂದು) ಸಮಸ್ಯೆಗೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ಇಲ್ಲಿನ ‘ಇನ್ವೆಸ್ಟಿಗೇಟಿವ್ ಆಫ್ತಾಲ್ಮೊಲಜಿ ಅಂಡ್ ವಿಶುವಲ್ ಸೈನ್ಸ್’ ಎಂಬ ನಿಯತಕಾಲಿಕೆಯು ಯುಕೆ ಬಯೋಬ್ಯಾಂಕ್ ಸಂಸ್ಥೆಯ ಅಧ್ಯಯನವನ್ನು ಪ್ರಕಟಿಸಿದೆ. ಈ ಸಂಸ್ಥೆಯು 2006- 2010ರ ಅವಧಿಯಲ್ಲಿ ಬ್ರಿಟನ್‌ನ ವಿವಿಧೆಡೆ ಕಣ್ಣಿನ ಚಿಕಿತ್ಸೆ ಪಡೆದಿರುವ ರೋಗಿಗಳ ದತ್ತಾಂಶವನ್ನು ಸಂಗ್ರಹಿಸಿ ಅಧ್ಯಯನ ನಡೆಸಿದೆ. ಇದರಲ್ಲಿ ಗ್ರಾಮೀಣ ಮತ್ತು ನಗರ ಭಾಗದ ಜನರೂ ಸೇರಿದ್ದಾರೆ.
ಹೆಚ್ಚು ಮತ್ತು ಕಡಿಮೆ ವಾಯು ಮಾಲಿನ್ಯ ಇರುವ ಪ್ರದೇಶಗಳ ನಿವಾಸಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ವಾಯುಮಾಲಿನ್ಯ ಕಡಿಮೆ ಇರುವ ಪ್ರದೇಶದಲ್ಲಿ ವಾಸಿಸುವವರಿಗಿಂತಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಗ್ಲಾಕೋಮಾ ಸಮಸ್ಯೆ ಶೇ 6ರಷ್ಟು ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ.
ವಾಯುಮಾಲಿನ್ಯ ಕಣ್ಣಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಈ ಸಂಶೋಧನೆ ಸಾಬೀತುಪಡಿಸುತ್ತದೆ. ಇದರ ಮೇಲೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ ಎಂದು ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್‌ನ ಪ್ರಾಧ್ಯಾಪಕ ಪೌಲ್ ಫಾಸ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
* 6 ಕೋಟಿ - ಗ್ಲಾಕೋಮಾದಿಂದ ಜಗತ್ತಿನಲ್ಲಿ ಬಳಲುತ್ತಿರುವವರು
* ಶೇ 50ರಷ್ಟು ಹೆಚ್ಚು - ಗ್ರಾಮೀಣ ಪ್ರದೇಶದ ಜನರಿಗಿಂತ ನಗರ ಭಾಗದ ಜನರಲ್ಲಿ ಗ್ಲಾಕೋಮಾ
* 1,11,370 ಮಂದಿ - ಯುಕೆ ಬಯೋಬ್ಯಾಂಕ್‌ನ ಅಧ್ಯಯನಕ್ಕೆ ಒಳಪಟ್ಟವರು
ಏನಿದು ಗ್ಲಾಕೋಮಾ
* ಗ್ಲಾಕೋಮಾ ಕಣ್ಣಿನ ದೃಷ್ಟಿಯನ್ನು ಕುಗ್ಗಿಸುವ ಸಮಸ್ಯೆಯಾಗಿದೆ. ಇದು ಕಣ್ಣಿನ ನರಗಳನ್ನು ಕ್ಷೀಣಗೊಳಿಸುತ್ತದೆ
* ಕಣ್ಣಿನಲ್ಲಿ ನೀರು ಒಸರುವುದು. ಕಣ್ಣು ಒತ್ತುವುದು ಇದರ ಪ್ರಾಥಮಿಕ ಲಕ್ಷಣ
* ಕಣ್ಣು ಮತ್ತು ಮಿದುಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿನರವನ್ನು ಇದು ಹಾನಿಗೊಳಿಸುತ್ತದೆ
* ಪ್ರಾರಂಭದಲ್ಲಿಯೇ ಇದಕ್ಕೆ ಚಿಕಿತ್ಸೆ ಪಡೆದರೆ ದೃಷ್ಟಿದೋಷದಿಂದ ತಪ್ಪಿಸಿಕೊಳ್ಳಬಹುದು. ಇಲ್ಲದಿದ್ದರೆ ಶಾಶ್ವತ ಅಂಧತ್ವಕ್ಕೆ ಕಾರಣವಾಗುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.