ಲಾಹೋರ್: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆಯಲ್ಲಿ ಭಾಗಿಯಾಗಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಂಗಳವಾರ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.
ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಹಾಗೂ ಕಾಶ್ಮೀರ ವಿಷಯವಾಗಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ. ಇದರ ನಡುವೆಯೇ ಒಂಬತ್ತು ವರ್ಷಗಳ ಬಳಿಕ ಭಾರತದ ವಿದೇಶಾಂಗ ಸಚಿವರು ನೆರೆಯ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ.
ಎಸ್‌ಸಿಒ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳಿಗೆ ಪಾಕಿಸ್ತಾನದ ಪ‍್ರಧಾನಿ ಶೆಹಬಾಜ್ ಷರೀಫ್ ಆಯೋಜಿಸಿರುವ
ಔತಣಕೂಟದಲ್ಲಿ ಜೈಶಂಕರ್ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಎಸ್‌ಸಿಒ ಸಭೆ ಇದೇ 15, 16ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಭಾರತ–ಪಾಕಿಸ್ತಾನದ ವಿದೇಶಾಂಗ ಸಚಿವರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವುದನ್ನು ಉಭಯ ದೇಶಗಳು ಈಗಾಗಲೇ ತಳ್ಳಿಹಾಕಿವೆ.
2015ರಲ್ಲಿ ನಡೆದಿದ್ದ ಅಫ್ಗಾನಿಸ್ತಾನ ಕುರಿತ ಸಭೆಯಲ್ಲಿ ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಲ್ಗೊಂಡಿದ್ದರು. ಆ ಬಳಿಕ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ. 2023ರಲ್ಲಿ ಗೋವಾದಲ್ಲಿ ನಡೆದಿದ್ದ ಎಸ್‌ಸಿಒ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಗೆ ಪಾಕಿಸ್ತಾನದ ಆಗಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.