ADVERTISEMENT

ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಅವರ ಎರಡು ನೌಕೆಗಳು

ಏಜೆನ್ಸೀಸ್
Published 15 ಮಾರ್ಚ್ 2023, 14:14 IST
Last Updated 15 ಮಾರ್ಚ್ 2023, 14:14 IST
ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ –ಕಡತ ಚಿತ್ರ
ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ –ಕಡತ ಚಿತ್ರ   

ಇರಾಕ್: ಇಲ್ಲಿನ ಟೈಗ್ರಿಸ್ ಮತ್ತು ಇಫ್ರಟಿಸ್ ನದಿಗಳ ಸಂಗಮ ಪ್ರದೇಶದಲ್ಲಿ ಎರಡು ವಿಹಾರ ನೌಕೆಗಳು ದಶಕಗಳಿಂದ ತೇಲುತ್ತಾ ನಿಂತಲ್ಲೇ ನಿಂತಿವೆ. ಈ ನೌಕೆಗಳು ಅಮೆರಿಕದ ವಿರುದ್ಧ ಯುದ್ಧಗೈದು ಗಲ್ಲು ಶಿಕ್ಷೆಗೆ ಗುರಿಯಾದ ಇರಾಕ್‌ನ ಸರ್ವಾಧಿಕಾರಿ ಸದ್ದಾಂ ಹುಸೇನ್‌ಗೆ ಸೇರಿದ್ದಾಗಿವೆ. ಈಗ ಜೀರ್ಣಾವಸ್ಥೆ ತಲುಪುತ್ತಿರುವ ಈ ನೌಕೆಗಳು ಪ್ರವಾಸಿಗರ ವೀಕ್ಷಣಾ ವಸ್ತುಗಳಾಗಿವೆ.

ಬಾಸ್ರಾಹ್ ಬ್ರೀಜ್:

ದಕ್ಷಿಣ ಇರಾಕ್‌ನ ಬಾಸ್ರಾ ನಗರದಲ್ಲಿ ಷಟ್‌–ಅಲ್‌–ಅರಬ್ ಜಲಮಾರ್ಗದಲ್ಲಿ ನಿಂತಿರುವ ಗತಿಸಿದ ಸರ್ವಾಧಿಕಾರ ಕಾಲದ ಸನ್ನಿವೇಶಗಳಿಗೆ ಸಾಕ್ಷಿಯಾದ ಸದ್ದಾಂ ಅವರ ಒಡೆತನದಲ್ಲಿದ್ದ ಈ ಐಷಾರಾಮಿ ನೌಕೆಯ ಹೆಸರು ’ಬಾಸ್ರಾಹ್‌ ಬ್ರೀಜ್’. ಬಾಸ್ರಾ ನಗರದ ಪಕ್ಕದಲ್ಲೇ ಸದ್ದಾಂರ ಬಿಗಿ ಆಡಳಿತಕ್ಕೆ ಒಳಗಾದ ಅಲ್– ಬಾಸುರ್ ಪ್ರದೇಶವೂ ಬರುತ್ತದೆ.

ADVERTISEMENT
ಬಾಸ್ರಾಹ್ ಬ್ರೀಜ್ ನೌಕೆಯ ಒಳಗಿನ ದೃಶ್ಯ –ಎಎಫ್‌ಪಿ ಚಿತ್ರ

ಸದ್ದಾಂರ ಕಾಲದಲ್ಲಿ ಬಾಸ್ರಾಹ್ ನೌಕೆಯ ಮೇಲ್ಭಾಗದಲ್ಲಿ ಕ್ಷಿಪಣಿ ಉಡಾವಣಾ ಜಾಗವಿತ್ತು. ಈಗ ಅದನ್ನು ಈಜುಕೊಳವಾಗಿ ಮಾರ್ಪಡಿಸಲಾಗಿದೆ. ಜತೆಗೆ ವಿಶ್ರಾಂತಿಗಾಗಿ ಮೂರು ಲಾಗ್‌ಗಳಿದ್ದು, ಹೆಲಿಪ್ಯಾಡ್ ಕೂಡ ಇದೆ.

ಬಾಸ್ರಾಹ್ ನೌಕೆಯ ಅಂಚುಗಳು ವಿಶೇಷ ಸರಳುಗಳಿಂದ ಜೋಡಿಸಲ್ಪಟ್ಟಿವೆ. ಇಲ್ಲಿ ಸದ್ದಾಂ ಅವರಿಗೆ ಸಂಬಂಧಿಸಿದ ವಸ್ತುಗಳಿದ್ದು, ಮಲಗುವ ಕೋಣೆಯಲ್ಲಿನ ಚಿನ್ನ ಹಾಗೂ ಕ್ರೀಮ್ ಬಣ್ಣದಿಂದ ಕೂಡಿದ ಬಟ್ಟೆಯನ್ನು ಹೊದಿಸಿದ ವಿಶಾಲ ಹಾಸಿಗೆ, 18ನೇ ಶತಮಾನದ ಶೈಲಿಯಲ್ಲಿ ನಿರ್ಮಿಸಿದ ಆರಾಮ ಕುರ್ಚಿಗಳು ಹಾಗೂ ಬಂಗಾರದ ಕೊಳವೆ ಹೊಂದಿರುವ ದೊಡ್ಡದಾದ ಸ್ನಾನ ಗೃಹವಿದೆ.

ಇದರ ಕಾರಿಡಾರ್‌ನಲ್ಲಿರುವ ಜಲಾಂತರ್ಗಾಮಿಯನ್ನು ಸಂಪರ್ಕಿಸುವ ರಹಸ್ಯ ದ್ವಾರವು ನೋಡುಗರ ಪ್ರಮುಖ ಆಕರ್ಷಣೆಯಾಗಿದೆ. ಈ ನೌಕೆಯಲ್ಲಿ ಸದ್ದಾಂ ಕೂರುತ್ತಿದ್ದರು ಹೊರತು ಒಮ್ಮೆಯೂ ಇದರಲ್ಲಿ ನೌಕಾ ಯಾನವನ್ನು ಕೈಗೊಳ್ಳಲಿಲ್ಲ ಎಂದು ಮಾಧ್ಯಮ ಉಲ್ಲೇಖಿಸಿದೆ.

‘ಇರಾಕ್‌ನಲ್ಲಿ 24 ವರ್ಷ ಸರ್ವಾಧಿಕಾರ ನಡೆಸಿದ್ದ ಸದ್ದಾಂ, ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದರು. ಹಣವನ್ನು ಹೇಗೆ ವಿನಿಯೋಗಿಸಬೇಕೆಂದು ತಿಳಿಯದೆ ಬಾಸ್ರಾಹ್ ಬ್ರೀಜ್‌ನಂಥ ನೌಕೆಗೆ ದುಂದುವೆಚ್ಚ ಮಾಡಿದರು. ಈ ವಿಹಾರ ನೌಕೆಯನ್ನು ನೋಡಲು ಅನೇಕರು ಬರುತ್ತಿದ್ದು, ಇದರ ವೈಭವ ಕಂಡ ಪ್ರತಿಯೊಬ್ಬ ಜನರೂ ರೋಮಾಂಚನಗೊಳ್ಳುತ್ತಾರೆ‘ ಎಂದು ಬಾಸ್ರಾದ ಮರಿನ್‌ ಸೈನ್ಸ್ ಯೂನಿವರ್ಸಿಟಿಯ ಪ್ರೊಫೆಸರ್, ಸಜ್ಜದ್ ಅವರು ಹೇಳುತ್ತಾರೆ.

‘1980ರಲ್ಲಿ ಸದ್ದಾಂ ಇರಾನ್ ದಾಳಿಗೆ ಹೆದರಿ ಜೋರ್ಡನ್‌ಗೆ ಓಡಿಹೋಗುವ ಮೊದಲು ಬಾಸ್ರಾಹ್‌ ನೌಕೆಯನ್ನು ಸೌದಿ ಅರೇಬಿಯಾಕ್ಕೆ ಮಾರಿದ್ದರು. ಮುಂದೆ ಅವರ ಗಲ್ಲು ಶಿಕ್ಷೆ ಬಳಿಕವೂ ನೌಕೆಯು ಅನಿಶ್ಚಿತವಾಗಿ ನೀರಿನಲ್ಲಿ ತೇಲುತ್ತಿತ್ತು. ಮಾಲಿಕನಿಲ್ಲದ ಈ ಐಷಾರಾಮಿ ನೌಕೆಯು 2007ರಲ್ಲಿ ಪ್ರಾನ್ಸ್‌ನಲ್ಲಿ ಪ್ರತ್ಯಕ್ಷವಾಗಿತ್ತು. ಆಗ ನೌಕೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಫ್ರಾನ್ಸ್ ಸರ್ಕಾರ ಸುಮಾರು 30 ಮಿಲಿಯನ್ ಡಾಲರ್‌ಗೆ (ಸರಿಸುಮಾರು 25 ಕೋಟಿ) ಅದನ್ನು ಸೈಮನ್ ಐಲ್ಯಾಂಡ್ ಎಂಬ ಕಂಪನಿಗೆ ಮಾರಲು ಮುಂದಾಗಿತ್ತು. ಇದರಿಂದ ಎಚ್ಚೆತ್ತ ಇರಾಕ್ ಆಡಳಿತವು ಬಾಸ್ರಾಹ್‌ ಬ್ರೀಜ್ ತನ್ನ ದೇಶದ ನೌಕೆಯಾಗಿದ್ದು ಅದರ ಮೇಲಿನ ಹಕ್ಕು ತನಗೆ ಸೇರಬೇಕು ಎಂದು ಪ್ರತಿಪಾದಿಸಿ, ಯಶಸ್ವಿಯಾಗಿತ್ತು.

ಸದ್ಯ ಈ ನೌಕೆ ಈಗ ಜೀರ್ಣಾವಸ್ಥೆಗೆ ತಲುಪುತ್ತಿದ್ದು, ಷಟ್–ಅಲ್–ಅರಬ್‌ ನದಿಯಲ್ಲಿ ತೇಲುತ್ತಿದೆ.

ಅಲ್– ಮನ್ಸೂರ್:

ಸದ್ದಾಂ ಅವರ ಇನ್ನೊಂದು ವೈಭವೋಪೇತ ನೌಕೆಯ ಹೆಸರು ’ಅಲ್‌ ಮನ್ಸೂರ್’. ಇದು ಬಾಸ್ರಾಹ್ ಬ್ರೀಜ್‌ಗಿಂತ ದೊಡ್ಡದಾಗಿದೆ. ಇದರ ಉದ್ದ 120 ಮೀ. ತೂಕ 7000 ಟನ್. ಫಿನ್‌ಲ್ಯಾಂಡ್‌ನಲ್ಲಿ ಅಲ್‌ ಮನ್ಸೂರ್‌ ನೌಕೆಯ ನಿರ್ಮಾಣ ನಡೆದಿದ್ದು 1983ರಲ್ಲಿ ಸದ್ದಾಂಗೆ ಹಸ್ತಾಂತರಿಸಲಾಗಿತ್ತು.

ಶಿಥಿಲಗೊಂಡ ಅಲ್ ಮನ್ಸೂರ್ ವಿಹಾರ ನೌಕೆ –ಎಎಫ್‌ಪಿ ಚಿತ್ರ

32 ಪ್ರಯಾಣಿಕರು ಹಾಗೂ 62 ಸಿಬ್ಬಂದಿ ತುಂಬುವ ಸಾಮರ್ಥ್ಯದ ಅಲ್–ಮನ್ಸೂರ್‌ನಲ್ಲಿ ಸದ್ದಾಂ ಹಲವಾರು ಬಾರಿ ಪ್ರಯಾಣಿಸಿದ್ದರು. ಎರಡು ದಶಕಗಳ ಹಿಂದೆ ಅಮೆರಿಕವು ಇರಾಕ್‌ ಮೇಲೆ ದಾಳಿ ನಡೆಸಿದ ಸಂದರ್ಭ ಅಲ್‌ ಮನ್ಸೂರ್ ನೌಕೆ ಗಲ್ಫ್ ರಾಷ್ಟ್ರಗಳಲ್ಲಿ ಲಂಗರು ಹಾಕಿಕೊಂಡಿತ್ತು.

’ಈ ನೌಕೆ ಮೂರು ಬಾರಿ ಅಮೆರಿಕದಿಂದ ಬಾಂಬ್ ದಾಳಿಗೊಳಗಾದರೂ ಮುಳುಗಲಿಲ್ಲ’ ಎಂದು ಬಾಸ್ರಾದಲ್ಲಿನ ಪ್ರಮುಖರೊಬ್ಬರು ಹೇಳಿರುವ ಹೇಳಿಕೆಯು ಮಾಧ್ಯಮದಲ್ಲಿ ಉಲ್ಲೇಖವಾಗಿದೆ.

2006ರಲ್ಲಿ ಸದ್ದಾಂ ಅವರ ಸಾವಿನ ನಂತರ ಸರಿಯಾಗಿ ನಿರ್ವಹಣೆಯಿಲ್ಲದೆ ಕಳೆದ ಜೂನ್‌ನಲ್ಲಿ ಷಟ್–ಅಲ್–ಅರಬ್‌ನ ಜಲರಾಶಿಯಲ್ಲಿ ಅಲ್ ಮನ್ಸೂರ್ ನೌಕೆ ಮಗುಚಿತು. ’ಮೋಟರ್‌ ಕಳವಾಗಿರುವ ಕಾರಣ ನೀರು ಒಳನುಗ್ಗಿ ನಿಯಂತ್ರಣ ತಪ್ಪಿ ನೌಕೆ ಮುಗುಚಿದೆ’ ಎಂದು ಮರಿನ್ ಎಂಜಿನಿಯರ್‌ ಅಲಿ ಮಹಮ್ಮದ್‌ ಹೇಳುತ್ತಾರೆ.

ಷಟ್–ಅಲ್–ಅರಬ್‌ ನದಿ ನೀರಿನಲ್ಲಿ ದಶಕಗಳಿಂದ ಯುದ್ಧದ ಪರಿಣಾಮ ಅರಾಜಕವಾಗಿ ತೇಲುತ್ತಿರುವ ದೋಣಿಗಳನ್ನು ತೆರವು ಗೊಳಿಸುವ ಅಭಿಯಾನವನ್ನು ಇಲ್ಲಿನ ಅಧಿಕಾರಿಗಳು ಶುರುಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.