ವಾಷಿಂಗ್ಟನ್: ಆಲ್‌ಖೈದಾ ಉಗ್ರ ಸಂಘಟನೆಯ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದ ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಕೊಲೆಯಾಗಿದ್ದಾನೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಹಮ್ಜಾ ಸಾವಿನ ಕುರಿತು ಮಾಹಿತಿ ಇರುವುದಾಗಿ ಅಮೆರಿಕದ ಮೂವರು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ, ಎಲ್ಲಿ ಮತ್ತು ಯಾವಾಗ ಹತ್ಯೆಯಾಗಿದೆಎಂಬುದನ್ನು ಅವರು ತಿಳಿಸಿಲ್ಲ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
ಇಬ್ಬರು ಅಮೆರಿಕ ಅಧಿಕಾರಿಗಳನ್ನು ಉಲ್ಲೇಖಿಸಿ, ಎರಡು ವರ್ಷಗಳಿಂದ ಅಮೆರಿಕ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಹಮ್ಜಾನ ಕೊಲೆಯಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.
ಈ ಕುರಿತ ಎನ್‌ಬಿಸಿ ವರದಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತ ಪಡಿಸಿಲ್ಲ. ಆದರೆ, ನಿರಾಕರಿ
ಸಿಯೂ ಇಲ್ಲ. ‘ಈ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದಷ್ಟೇ ಅವರು ಹೇಳಿದ್ದಾರೆ.
ಅಮೆರಿಕ ವಿದೇಶಾಂಗ ಇಲಾಖೆಯು ಹಮ್ಜಾ ತಲೆಗೆ 1 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನವನ್ನು2019ರ ಫೆಬ್ರುವರಿಯಲ್ಲಿ ಘೋಷಿಸಿತ್ತು. ಆದರೆ ಎರಡೂ ಮಾಧ್ಯಮ ವರದಿಗಳ ಪ್ರಕಾರ, ಈ ಬಹುಮಾನ ಘೋಷಣೆಗೂ ಮುನ್ನವೇ ಹಮ್ಜಾನ ಕೊಲೆಯಾಗಿದೆ.
ಲಾಡೆನ್ ಮೂರನೇ ಹೆಂಡತಿಯ ಮಗನಾದ ಹಮ್ಜಾ, ಆತನ 20 ಮಕ್ಕಳಲ್ಲಿ 15ನೇಯವನು. 30 ವರ್ಷದ ಹಮ್ಜಾ ಆಲ್‌ಖೈದಾ ಸಂಘಟನೆಯ ನಾಯಕನಾಗಿ ಬೆಳೆಯುತ್ತಿದ್ದಾನೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯು ಬಹುಮಾನ ಘೋಷಿಸುವ ವೇಳೆ ಹೊರಡಿಸಿದ್ದ ಪ್ರಕಟಣೆಯಲ್ಲಿ ಉಲ್ಲೇಖಿಸಿತ್ತು.
ಈತ ತನ್ನ ತಂದೆಯ ಸಾವಿಗೆ ಕಾರಣವಾದ ಅಮೆರಿಕದ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಆಡಿಯೊ ಮತ್ತು ವಿಡಿಯೊ ಮೂಲಕ ಜಿಹಾದಿಗಳಿಗೆ ಸಂದೇಶ ರವಾನಿಸುತ್ತಿದ್ದ. ಅಬೊಟಾಬಾದ್‌ನಲ್ಲಿ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆ ಮಾಡಿದ ವೇಳೆ ಸಂಗ್ರಹಿಸಿದ್ದ ಕೆಲ ದಾಖಲೆಗಳಲ್ಲಿ ಹಮ್ಜಾನನ್ನು ಆಲ್‌ಖೈದಾದ ನಾಯಕನನ್ನಾಗಿ ಬೆಳೆಸುವ ಕುರಿತ ಮಹತ್ವದ ಮಾಹಿತಿ ದೊರೆತಿತ್ತು ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.