ಕಾಬೂಲ್: ಅಮೆರಿಕವು ಕಾಬೂಲ್‌ನ ನಿವಾಸವೊಂದರ ಮೇಲೆ ಕಳೆದ ವಾರ ಡ್ರೋನ್ ದಾಳಿ ನಡೆಸಿದೆ ಎಂದು ತಾಲಿಬಾನ್ ಮುಖ್ಯ ವಕ್ತಾರ ಜಬಿಯುಲ್ಲಾ ಮುಜಾಹಿದ್ ತಿಳಿಸಿದ್ದಾನೆ.
ಅಮೆರಿಕದ ದಾಳಿಯನ್ನು ಆಡಳಿತಾರೂಢ ತಾಲಿಬಾನ್ ತೀವ್ರವಾಗಿ ಖಂಡಿಸುತ್ತದೆ. ದಾಳಿಯು ಅಂತರರಾಷ್ಟ್ರೀಯ ನಿಯಮಗಳ ಹಾಗೂ ಅಮೆರಿಕದ ಪಡೆಗಳನ್ನು ಅಫ್ಗಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವಾಗ ಮಾಡಿರುವ ಒಪ್ಪಂದಗಳ ಉಲ್ಲಂಘನೆಯಾಗಿದೆ ಎಂದು ಮುಜಾಹಿದ್ ಹೇಳಿದ್ದಾನೆ.
ಅಲ್‌ಕೈದಾ ಉಗ್ರ ಸಂಘಟನೆ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿಯನ್ನು ಶನಿವಾರ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, ದಾಳಿಯನ್ನು ಖಂಡಿಸಿ ತಾಲಿಬಾನ್ ಹೇಳಿಕೆ ಬಿಡುಗಡೆ ಮಾಡಿದೆ.
ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ನಿವಾಸದಲ್ಲಿ ಝವಾಹಿರಿಯನ್ನು ಹತ್ಯೆ ಮಾಡಲಾಗಿದೆ. ದಾಳಿಯಲ್ಲಿ ನಾಗರಿಕರ ಹತ್ಯೆಯಾಗಿಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ ದಾಳಿಗೆ ಸಂಚು ಹೂಡಿದ್ದೂ ಸೇರಿದಂತೆ ಹಲವು ಭಯೋತ್ಪಾದಕ ಕೃತ್ಯಗಳನ್ನೆಸಗಿದ ಆರೋಪ ಝವಾಹಿರಿ ಮೇಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.