ಬೀಜಿಂಗ್: ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವಚೀನಾದ ಪ್ರಮುಖ ಇ–ಕಾಮರ್ಸ್ ಸಂಸ್ಥೆ ಅಲಿಬಾಬಾ ಮುಖ್ಯಸ್ಥ ಜಾಕ್ ಮಾ ಅವರು ಸೋಮವಾರನಿವೃತ್ತಿ ಕುರಿತ ನಿರ್ಧಾರವನ್ನು ಘೋಷಿಸುವ ಸಾಧ್ಯತೆ ಇದೆ.
ಸಂಸ್ಥೆಯ ಸಹ ಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ಅವರುಸೋಮವಾರ54ನೇ ವಸಂತಕ್ಕೆ ಕಾಲಿಡಲಿದ್ದಾರೆ.
ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ನಿವೃತ್ತಿಯ ಸುಳಿವು ನೀಡಿದ್ದಾರೆ. ಆದರೆ, ಅವರು ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಸಂಸ್ಥೆಯನ್ನು ಮುನ್ನಡೆಸುವ ವಿಚಾರವಾಗಿ ಸೋಮವಾರ ತೀರ್ಮಾನ ಕೈಗೊಳ್ಳುವರು ಎಂದು ಸಂಸ್ಥೆಯ ವಕ್ತಾರರೊಬ್ಬರನ್ನು ಉಲ್ಲೇಖಿಸಿ ಚೀನಾದ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
1999ರಲ್ಲಿ ಅಲಿಬಾಬಾ ಅರಂಭಿಸುವುದಕ್ಕೂ ಮುನ್ನ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಜಾಕ್ ಅವರು ಇದೀಗ ಮತ್ತೆ ಶಿಕ್ಷಣ ಕ್ಷೇತ್ರದಲ್ಲಿಯೇ ತಮ್ಮನ್ನು ತೊಡಗಿಸಿಕೊಳ್ಳಲು ಬಯಸಿದ್ದಾರೆ.
‘ಜಾಕ್ ಮಾ ಪ್ರತಿಷ್ಠಾನ ಸ್ಥಾಪಿಸುವುದಕ್ಕಾಗಿ ಹತ್ತು ವರ್ಷಗಳಿಂದ ಸಿದ್ಧತೆ ನಡೆಸಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲಿ ನೆರವಾಗುವುದು, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು.. ಹೀಗೆ ಹಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳಬೇಕೆಂದಿದ್ದೇನೆ’ ಎಂದು ನಿವೃತ್ತಿಯ ನಂತರದ ಜೀವನ ಬಗ್ಗೆ ಹೇಳಿದ್ದಾರೆ.
ಚೀನಾದ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ2014ರಲ್ಲಿ ಜಾಕ್ ಮಾ ಪ್ರತಿಷ್ಠಾನ ಸ್ಥಾಪಿಸಿದರು.2013ರಲ್ಲಿಯೇ ಅವರು ಸಂಸ್ಥೆಯ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದರು.
ಅವರ ವೈಯಕ್ತಿಕ ಆಸ್ತಿ ಮೌಲ್ಯ₹ 28.80 ಲಕ್ಷ ಕೋಟಿ ಇದೆ. ಆಲಿಬಾಬಾ ಸಂಸ್ಥೆಯ ಒಟ್ಟಾರೆ ಆಸ್ತಿ ಮೌಲ್ಯ ₹ 30.31 ಲಕ್ಷ ಕೋಟಿಯಷ್ಟಿದೆ.
ಮೈಕ್ರೊಸಾಫ್ಟ್ ಸಂಸ್ಥೆಯ ಸ್ಥಾಪಕ ಬಿಲ್ ಗೇಟ್ಸ್ ಅವರ ಮಾರ್ಗವನ್ನು ಅನುಸರಿಸುವುದಾಗಿ ಹೇಳಿದ್ದಾರೆ. ‘ಅವರಿಂದ ಸಾಕಷ್ಟನ್ನು ಕಲಿಯುವುದಿದೆ. ನಾನು ಅವರಷ್ಟು ಸಿರಿವಂತನಾಗಲು ಸಾಧ್ಯವಿಲ್ಲ. ಆದರೆ ಅವರಿಗಿಂತಲೂ ಬೇಗ ನಿವೃತ್ತಿ ಹೊಂದಬಹುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.