ADVERTISEMENT

ಅಮೆರಿಕ DOGE ನೇಮಕಾತಿ | ವಾರಕ್ಕೆ 80 ತಾಸು ದುಡಿಯುವವರಿಗೆ ಮಾತ್ರ ಅವಕಾಶ: ಮಸ್ಕ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 15:56 IST
Last Updated 15 ನವೆಂಬರ್ 2024, 15:56 IST
<div class="paragraphs"><p>ಎಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ</p></div>

ಎಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ

   

ವಾಷಿಂಗ್ಟನ್‌: ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಗೆ (DOGE) ಅಭ್ಯರ್ಥಿಗಳ ಅಗತ್ಯವಿದ್ದು, ಅಪಾರ ಬುದ್ಧಿಮತ್ತೆಯ, ಸರ್ಕಾರಿ ಯಂತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಹಾಗೂ ವಾರಕ್ಕೆ 80 ಗಂಟೆಗಳ ಕಾಲ ದುಡಿಯಲು ಮನಸ್ಸಿರುವವರಿಗೆ ಅವಕಾಶ ಎಂದು ಇಲಾಖೆಯ ಮುಖ್ಯಸ್ಥರೂ ಆಗಿರುವ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

ನೇಮಕಾತಿಗೆ ಜಾಹೀರಾತು ಪ್ರಕಟಿಸುತ್ತಿದ್ದಂತೆ DOGEನ ಸಾಮಾಜಿಕ ಮಾಧ್ಯಮ ಅನುಸರಿಸುವವರ ಸಂಖ್ಯೆ 14 ಲಕ್ಷಕ್ಕೆ ಏರಿಕೆಯಾಗಿದೆ. 

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್, ‘DOGEಗೆ ನೆರವಾಗಲು ನಮ್ಮ ಮೇಲೆ ನಂಬಿಕೆ ಇಟ್ಟ ಸಾವಿರಾರು ಅಮೆರಿಕನ್ನರು ಆಸಕ್ತಿ ತೋರಿಸಿದ್ದಾರೆ. ಹೊಸ ಆಲೋಚನೆಯುಳ್ಳ ತಾತ್ಕಾಲಿಕ ಆಸಕ್ತರು ನಮಗೆ ಬೇಡ. ವಾರಕ್ಕೆ 80 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಬಲ್ಲ ಮತ್ತು ಸರ್ಕಾರಿ ಯಂತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಹಾಗೂ ವೆಚ್ಚಕ್ಕೆ ಕಡಿವಾಣ ಹಾಕಬಲ್ಲವರನ್ನು ಮಾತ್ರ ನೇಮಿಸಿಕೊಳ್ಳಲಾಗುವುದು. ಆಸಕ್ತರು ಎಕ್ಸ್‌ನ ತಮ್ಮ ಖಾತೆಗಳ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು’ ಎಂದು ಹೇಳಿದ್ದಾರೆ.

ಈ ಉದ್ಯೋಗಕ್ಕೆ ನಿರ್ದಿಷ್ಟ ವಿದ್ಯಾರ್ಹತೆ ಹಾಗೂ ಅನುಭವವನ್ನು ಕೇಳಿಲ್ಲ. ಬದಲಿಗೆ ದೀರ್ಘ ಕಾಲ ದುಡಿಯಲು ಮನಸ್ಸಿರುವವರೆಗೆ ಮಾತ್ರ ಅವಕಾಶ ಎಂದೆನ್ನಲಾಗಿದೆ. ಅರ್ಜಿ ಸಲ್ಲಿಸುವವರು ಮಾಸಿಕ 8 ಅಮೆರಿಕನ್ ಡಾಲರ್‌ ನೀಡಿ ಚಂದಾದಾರರಾಗಿರುವ ಎಕ್ಸ್‌ನ ಅಧಿಕೃತ ಖಾತೆಗಳನ್ನು ಹೊಂದಿರಬೇಕು ಎಂದು ಹೇಳಲಾಗಿದೆ.

‘ಇದು ಅತ್ಯಂತ ಕಷ್ಟಕರ ಕೆಲಸ ಬೇಡುವ ಹುದ್ದೆಯಾಗಿದೆ. ಸಾಕಷ್ಟು ಶತ್ರುತ್ವ ಕಟ್ಟಿಕೊಳ್ಳಬೇಕಾಗುತ್ತದೆ. ಆದರೆ ಅದಕ್ಕೆ ಯಾವುದೇ ಪರಿಹಾರ ಸಿಗದು’ ಎಂದು ಮಸ್ಕ್ ವಿವರಿಸಿದ್ದಾರೆ.

ಮತ್ತೊಂದೆಡೆ ವಿವೇಕ್ ರಾಮಸ್ವಾಮಿ ಅವರು ಟ್ವೀಟ್ ಮಾಡಿ, ‘ಇದು ಸರ್ಕಾರಿ ಹುದ್ದೆಗಳಿಗೆ ವ್ಯತಿರಿಕ್ತವಾದದ್ದು. ಎ) ಕಡಿಮೆ ಅಥವಾ ಯಾವುದೇ ಕೆಲಸವಿಲ್ಲ, ಬಿ) ಜನರು ಏನನ್ನು ಕೇಳಬಯಸುತ್ತಾರೋ ಅದಷ್ಟನ್ನೇ ಹೇಳಿ, ಸಿ) ಅವರು ಗಳಿಸುವ ಹಣಕ್ಕಿಂತ ಹೆಚ್ಚಿನ ಹಣವನ್ನು ಗಳಿಸಿ’ ಎಂದು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.